ಜೈಪುರ (ರಾಜಸ್ಥಾನ): ಇಂದು ನಮ್ಮ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ. ನಮ್ಮ ಸಂವಿಧಾನವನ್ನು ಬದಲಾಯಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಅಲ್ಲದೇ, ಈ ನಡೆಯೇ ಸರ್ವಾಧಿಕಾರವಾಗಿದ್ದು, ಇದಕ್ಕೆ ನಾವೆಲ್ಲರೂ ಉತ್ತರವನ್ನು ನೀಡುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಕಳೆದ 10 ವರ್ಷಗಳಿಂದ ದೇಶದಲ್ಲಿ ನಿರುದ್ಯೋಗ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮತ್ತು ಅಸಮಾನತೆಯನ್ನು ಸರ್ಕಾರ ಸೃಷ್ಟಿಸಿದೆ. ತನ್ನನ್ನು ತಾನು ಶ್ರೇಷ್ಠ ಎಂದು ಬಿಂಬಿಸಿಕೊಳ್ಳುವ ಮೋದಿ ದೇಶದ ಘನತೆ ಮತ್ತು ಅದರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಿತ್ತು ಹಾಕುತ್ತಿದ್ದಾರೆ. ಇಡೀ ವ್ಯವಸ್ಥೆಯಲ್ಲಿ ಭಯವನ್ನೇ ಸ್ಥಾಪಿಸಲಾಗಿದೆ ಎಂದು ದೂರಿದರು.
ಇದೇ ವೇಳೆ, ದೇಶ ಕೆಲವೇ ಜನರ ಸ್ವತ್ತಲ್ಲ, ಎಲ್ಲರಿಗೂ ಸೇರಿದ್ದು ಎಂದು ಪ್ರತಿಪಾದಿಸಿದ ಸೋನಿಯಾ, ನಮ್ಮ ಪೂರ್ವಜರು ದೇಶಕ್ಕಾಗಿ ರಕ್ತ ಹರಿಸಿದ್ದಾರೆ. ಈಗ ವಿರೋಧ ಪಕ್ಷದ ನಾಯಕರನ್ನು ಬೆದರಿಸಿ ಬಿಜೆಪಿಗೆ ಸೇರುವಂತೆ ಒತ್ತಡ ಹಾಕಲು ಹಲವು ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಮೋದಿ ಸುಳ್ಳುಗಾರರ ನಾಯಕ ಎಂದ ಖರ್ಗೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಿ ಮೋದಿ ಸುಳ್ಳುಗಾರರ ನಾಯಕ. ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಲು ಮೋದಿ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೇ, ಬಿಜೆಪಿ ಸರ್ಕಾರದ ದೇಶದ ವಿದೇಶಾಂಗ ನೀತಿಯನ್ನೂ ಪ್ರಶ್ನಿಸಿದ ಅವರು, ಚೀನಾ ಭಾರತದ ಭೂಮಿಯನ್ನು ಅತಿಕ್ರಮಿಸಿ ಭಾರತದ ಹಳ್ಳಿಗಳ ಹೆಸರನ್ನು ಬದಲಾಯಿಸುತ್ತಿದೆ. ಆದರೆ, ಪ್ರಧಾನಿ ಮೋದಿ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ತನಗೆ 56 ಇಂಚಿನ ಎದೆಯಿದೆ ಎಂದು ಅವರು (ಮೋದಿ) ಹೇಳಿಕೊಳ್ಳುತ್ತಾರೆ. ಅದು 56 ಇಂಚಿನದ್ದಾಗಿರಲಿ, 55 ಅಥವಾ 54 ಆಗಿರಲಿ, ಟೈಲರ್ಅನ್ನು ಕರೆದು ಅಳತೆ ಮಾಡಿ ಅದು ಏನೆಂದು ನೋಡುತ್ತೇವೆ ಎಂದು ವ್ಯಂಗ್ಯವಾಡಿದ ಖರ್ಗೆ, ನೀವು ಮೂರನೇ ಎರಡರಷ್ಟು ಬಹುಮತ ನೀಡಿದರೆ, ಈ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಪ್ರಧಾನಿ ಮೋದಿ, ಮತ್ತವರ ಜನರು ಮತ್ತು ಆರ್ಎಸ್ಎಸ್ನವರು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
55 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಶ್ರಮಿಸಿದೆ. ಕಾಂಗ್ರೆಸ್ ಮೂಲಸೌಕರ್ಯಗಳನ್ನು ನಿರ್ಮಿಸಿದೆ ಮತ್ತು ಐಐಟಿಗಳು ಮತ್ತು ಐಐಎಂಗಳಂತಹ ಸಂಸ್ಥೆಗಳನ್ನು ಸ್ಥಾಪಿಸಿದೆ. ಆದರೆ, ಕಾಂಗ್ರೆಸ್ ಸರ್ಕಾರ ಹಾಕಿದ ಹಳಿಗಳ ಮೇಲೆ ರೈಲುಗಳನ್ನು ಬಾವುಟ ತೋರಿಸುವ ಮೂಲಕ ಮೋದಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಕುಟುಕಿದರು. ಅಲ್ಲದೇ, ಮೋದಿಯವರು ನಮ್ಮ ಗ್ಯಾರಂಟಿ ಎಂಬ ಪದವನ್ನೇ ಕದ್ದಿದ್ದಾರೆ ಎಂದ ಖರ್ಗೆ, ಕಾಂಗ್ರೆಸ್ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಭರವಸೆಗಳನ್ನು ಈಡೇರಿಸಿವೆ ಎಂದು ಹೇಳಿದರು.
ದೇಶದ ಸ್ಥಿತಿ ಏನಾಗಿದೆ ಎಂದು ತೋರಿಸುತ್ತಿಲ್ಲ- ಪ್ರಿಯಾಂಕಾ: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ಕೇಂದ್ರ ಏಜೆನ್ಸಿಗಳು ಬಂಧಿಸಿರುವುದನ್ನು ಉಲ್ಲೇಖಿಸಿ, ಕೇಂದ್ರದ ಬಿಜೆಪಿ ಆಡಳಿತದಲ್ಲಿ ಪ್ರತಿಪಕ್ಷಗಳು ದಾಳಿಗೆ ಒಳಗಾಗುತ್ತಿವೆ. ಬಿಜೆಪಿಯವರು ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅಂತಹ ಜನರು ಪಕ್ಷಕ್ಕೆ ಸೇರುವ ಮೂಲಕ ಶುದ್ಧರಾಗುತ್ತಾರೆ. ಅದರ ನಂತರ ಯಾರೂ ಆ ವಿಷಯವನ್ನೇ ಎತ್ತುವುದಿಲ್ಲ ಎಂದರು.
ಬಿಜೆಪಿ ಸರ್ಕಾರ ಕೆಲವು ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟು ರಾಷ್ಟ್ರದ ಆಸ್ತಿಯನ್ನು ಅವರಿಗೆ ಹಸ್ತಾಂತರಿಸುತ್ತಿದೆ. ಆದಾಗ್ಯೂ, ಅನೇಕ ಕೈಗಾರಿಕೋದ್ಯಮಿಗಳು ಉದ್ಯೋಗಗಳನ್ನು ಸೃಷ್ಟಿಸುತ್ತಾರೆ. ಆದರೆ, ಕೆಲವು ಕೈಗಾರಿಕೋದ್ಯಮಿಗಳಿಗೆ ಸರ್ಕಾರ ಒಲವು ತೋರುವುದರಿಂದ ಇತರರಿಗೆ ಅನ್ಯಾಯವಾಗಿದೆ. ನಿಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ವಾಸ್ತವ ಏನೆಂದು ಗುರುತಿಸುವ ಸಮಯ ಬಂದಿದೆ. 'ಅಬ್ಕಿ ಬಾರ್ 400 ಪಾರ್' (ಈ ಬಾರಿ 400ಕ್ಕೂ ಸ್ಥಾನಕ್ಕೂ ಹೆಚ್ಚು) ಎಂಬ ಘೋಷಣೆಗಳನ್ನು ಕೇಳುತ್ತಿದ್ದೀರಿ. ಮೋದಿ ವಿದೇಶ ಪ್ರವಾಸ ಮಾಡುವುದನ್ನೂ ನೋಡುತ್ತಿದ್ದೀರಿ. ಆದರೆ, ದೇಶದ ಸ್ಥಿತಿ ಏನಾಗಿದೆ ಎಂಬುದು ಸ್ಪಷ್ಟವಾಗಿ ತೋರಿಸುತ್ತಿಲ್ಲ ಎಂದು ಟೀಕಿಸಿದರು.
ಮೋದಿ ಸರ್ಕಾರ ಬಡವರಿಗೆ 5 ಕೆಜಿ ಪಡಿತರ ನೀಡುತ್ತಿದೆ. ಆದರೆ, ಉದ್ಯೋಗ ನೀಡುತ್ತಿಲ್ಲ. ನೀವು ಜಾಗೃತರಾಗಬೇಕು, ಬಡವರಾಗಲಿ, ದುರ್ಬಲರಾಗಲಿ, ಕೂಲಿ ಕೆಲಸ ಮಾಡುವವರಾಗಲಿ ನಿಮ್ಮ ಜೀವನದಲ್ಲಿ ಅನ್ಯಾಯ ಆಗುತ್ತಿದೆ ಎಂಬ ಮಾತು ಕೇಳಿ ಬರುತ್ತಿಲ್ಲ. ನಿರುದ್ಯೋಗ ಮತ್ತು ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರತಿ ರಾಜ್ಯದಲ್ಲೂ ನಡೆಯುತ್ತಿದೆ. ಬಡವರು ಮತ್ತು ರೈತರನ್ನು ಕೇಳಲು ಯಾರೂ ಇಲ್ಲ. ನಮ್ಮ ಪ್ರಣಾಳಿಕೆಗೆ 'ನ್ಯಾಯ ಪತ್ರ' ಎಂದು ಹೆಸರಿಟ್ಟಿದ್ದೇವೆ, ಈ ಪ್ರಣಾಳಿಕೆ ಚುನಾವಣೆಯ ನಂತರ ನಾವು ಮರೆತುಬಿಡುವ ಘೋಷಣೆಗಳ ಪಟ್ಟಿಯಲ್ಲ. ಇದು ನ್ಯಾಯವನ್ನು ಬಯಸುವ ರಾಷ್ಟ್ರದ ಧ್ವನಿಯಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್ ಚಿಂತನೆ ಪ್ರತಿಬಿಂಬಿಸುತ್ತದೆ: ಪ್ರಧಾನಿ ಮೋದಿ - PM Modi