ನವದೆಹಲಿ: ಎಲ್ಲಿಗಾದರೂ ಪ್ರಯಾಣ ಮತ್ತು ಪ್ರವಾಸಕ್ಕೆಂದು ಜನರು ರೈಲ್ವೆಯನ್ನು ಹೆಚ್ಚಾಗಿ ಅವಲಂಬಿಸುತ್ತಾರೆ. ಅದಕ್ಕಾಗಿ ಮುಂಗಡವಾಗಿಯೇ ಟಿಕೆಟ್ ಬುಕಿಂಗ್ ಮಾಡಿಸುತ್ತಾರೆ. ರೈಲ್ವೆ ನಿಯಮದ ಪ್ರಕಾರ, 120 ದಿನ ಅಂದರೆ 4 ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿಕೊಳ್ಳುವ ಅವಕಾಶವಿತ್ತು. ಅದನ್ನು ಈಗ ಇಲಾಖೆ ಕಡಿತ ಮಾಡಿ ಆದೇಶ ಹೊರಡಿಸಿದೆ.
ರೈಲ್ವೆ ಮಂಡಳಿಯ ಅಧಿಸೂಚನೆಯಂತೆ, ರೈಲ್ವೆ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಅವಧಿಯು ಈಗಿರುವ 120 ದಿನಗಳ ಬದಲಿಗೆ 60 ದಿನಕ್ಕೆ ಇಳಿಕೆ ಮಾಡಲಾಗಿದೆ. ಈ ನಿಯಮ ನವೆಂಬರ್ 1, 2024 ರಿಂದ ಅನ್ವಯಿಸುತ್ತದೆ ಎಂದು ಗುರುವಾರ (ಅಕ್ಟೋಬರ್ 17) ತಿಳಿಸಿದೆ.
120 ದಿನಗಳ ಮುಂಗಡ ಕಾಯ್ದಿರಿಸುವಿಕೆ ಅವಧಿ (ಎಆರ್ಪಿ)ಯನ್ನು ಇಳಿಕೆ ಮಾಡಿದ್ದರೂ, ಅಕ್ಟೋಬರ್ 31 ರವರೆಗೆ ಮಾಡಿದ ಎಲ್ಲಾ ಬುಕಿಂಗ್‌ಗಳು ಮಾನ್ಯವಾಗಿರುತ್ತವೆ. ನಿಗದಿತ ದಿನಾಂಕದ ನಂತರ ಎಲ್ಲ ಟಿಕೆಟ್ಗಳನ್ನು ರದ್ದು ಮಾಡಲಾಗುತ್ತದೆ ಎಂದು ರೈಲ್ವೆ ಮಂಡಳಿ ಹೇಳಿದೆ. ಮುಂಗಡ ಬುಕಿಂಗ್ ಅವಧಿಯನ್ನು ಬದಲಾವಣೆ ಮಾಡಿದ್ದರ ಹಿಂದಿನ ಕಾರಣವನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಿಲ್ಲ.
ವಿದೇಶಿ ಪ್ರವಾಸಿಗರ ನಿಯಮದಲ್ಲಿ ಬದಲಿಲ್ಲ: ಎಆರ್ಪಿ ಕಡಿಮೆ ಮಾಡಿದ್ದರೂ, ವಿದೇಶಿ ಪ್ರವಾಸಿಗರ ಇರುವ ಕಾಲಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಜೊತೆಗೆ ಹಗಲಿನಲ್ಲೂ ಸಂಚರಿಸುವ ತಾಜ್ ಎಕ್ಸ್‌ಪ್ರೆಸ್, ಗೋಮತಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳಿಗೆ ಈ ನಿಯಮ ಅನ್ವಯಿಸಲ್ಲ. ಕಾರಣ, ಈ ರೈಲುಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಕಡಿಮೆ ಸಮಯದ ಮಿತಿ ಈಗಾಗಲೇ ಜಾರಿಯಲ್ಲಿದೆ ಎಂದು ಮಂಡಳಿ ತಿಳಿಸಿದೆ.
ಇನ್ನು, ವಿದೇಶಿ ಪ್ರವಾಸಿಗರಾಗಿದ್ದಲ್ಲಿ ಅವರಿಗೆ ಈಗಿರುವ 365 ದಿನಗಳ ಕಾಲಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿದೇಶಿಗರು ವರ್ಷದಲ್ಲಿ ಯಾವುದೇ ದಿನಕ್ಕಾದರೂ ರೈಲ್ವೆ ಟಿಕೆಟ್ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಮಾರ್ಚ್ 25, 2015 ರಂದು ಎಆರ್ಪಿ ಅವಧಿಯನ್ನು 60 ದಿನಗಳಿಂದ 120 ದಿನಕ್ಕೆ ಹೆಚ್ಚಿಸಿತ್ತು.
ಇದನ್ನೂ ಓದಿ: ಪ್ರಯಾಣಿಕರಿಗೆ ಖುಷಿ ಸುದ್ದಿ: ದೀಪಾವಳಿ ಹಬ್ಬದ ಸೀಸನ್ನಲ್ಲಿ 5,975 ವಿಶೇಷ ರೈಲು ಸಂಚಾರ - SPECIAL TRAINS