ನವದೆಹಲಿ: ಸಂಸತ್ ಅಧಿವೇಶನದಲ್ಲಿ ವಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯನ್ನು ಕಟ್ಟಿಹಾಕಲು ಹಲವು ತಂತ್ರಗಳನ್ನು ರೂಪಿಸುತ್ತಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಜಾತಿಗಣತಿ ವಿಷಯವನ್ನು ಪ್ರಸ್ತಾಪಿಸಿದ್ದು, ಆಡಳಿತ ಎನ್‌ಡಿಎ ಮತ್ತು ವಿಪಕ್ಷ ಇಂಡಿಯಾ ಕೂಟದ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ.
ಜಾತಿಗಣತಿ ವಿಚಾರವು ಎನ್‌ಡಿಎ ಕೂಟವನ್ನು ಬಲೆಗೆ ಬೀಳಿಸುವ ತಂತ್ರವಾಗಿತ್ತು. ಇದರಿಂದ ಇಂಡಿಯಾ ಮೈತ್ರಿ ಪಕ್ಷಗಳು ಬಲಗೊಳ್ಳಲಿವೆ. ಪ್ರತಿಪಕ್ಷಗಳಿಗೆ ಸರ್ಕಾರವನ್ನು ಗುರಿಯಾಗಿಸಲು ಮತ್ತೊಂದು ಅಸ್ತ್ರ ಸಿಕ್ಕಂತಾಯಿತು. ಆಡಳಿತ ಮೈತ್ರಿಯಲ್ಲಿ ಕೆಲ ಪಕ್ಷಗಳಿಗೆ ಇದು ಇರುಸು - ಮುರುಸು ಉಂಟುಮಾಡಿದೆ ಎಂಬುದು ವಿಪಕ್ಷಗಳ ನಾಯಕರ ಅಭಿಮತವಾಗಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಂಸತ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಿವ ಬಗ್ಗೆ ಚರ್ಚಿಸಲಾಯಿತು. ಪಕ್ಷದ ಸಂಸದರು ಜಾತಿ ಗಣತಿ ಕುರಿತ ಖಾಸಗಿ ಮಸೂದೆಯನ್ನು ಮಂಡಿಸುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ.
ರಾಹುಲ್ ಅಸ್ತ್ರಕ್ಕೆ ಬಿದ್ದ ಸರ್ಕಾರ: ಈ ತಂತ್ರದ ಭಾಗವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಲೋಕಸಭೆಯಲ್ಲಿ ಜಾತಿಗಣತಿ ವಿಚಾರವನ್ನು ಪ್ರಸ್ತಾಪಿಸಿದರು. ಇದನ್ನು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಪ್ರಶ್ನಿಸಿದರು. ಜೊತೆಗೆ ರಾಹುಲ್ ಗಾಂಧಿ ಅವರ ಜಾತಿಯ ಮೇಲೂ ಪ್ರಶ್ನಿಸಿದರು. ಇದು ವಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದ್ದು, ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಅವರು ಜಾತಿ ವಿಚಾರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಮಾಜದ ಕಟ್ಟಕಡೆಯ ವರ್ಗದ ಜನರ ಹಕ್ಕುಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಸದನದಲ್ಲಿ ಜಾತಿ ಅವಮಾನ ಎದುರಿಸಬೇಕಾಗಿದೆ. ಇದಕ್ಕೆ ನಾವು ಸಿದ್ಧ ಎಂದು ಹೇಳುವ ಮೂಲಕ ರಾಹುಲ್ ಬೆಂಬಲಕ್ಕೆ ಬಲವಾಗಿ ನಿಂತಿದ್ದಾರೆ.
ಬಿಜೆಪಿಯಿಂದ ವೈಯಕ್ತಿಕ ನಿಂದನೆ: ಠಾಕೂರ್ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿದರು. ಇದರ ವಿರುದ್ಧವೂ ಮುಗಿಬಿದ್ದ ವಿಪಕ್ಷಗಳು ಪ್ರಧಾನ ಮಂತ್ರಿಯ ವಿರುದ್ಧ ವಿಶೇಷ ಹಕ್ಕುಗಳ ಉಲ್ಲಂಘನೆ ಆರೋಪ ಮಾಡಿದ್ದಾರೆ. ಈ ಎಲ್ಲ ಆರೋಪ - ಪ್ರತ್ಯಾರೋಪ, ರಾಜಕೀಯದ ನಡುವೆ ಬಜೆಟ್ ಮೇಲಿನ ಚರ್ಚೆಯು ಜಾತಿ ಗಣತಿಗೆ ವಿಷಯಕ್ಕೆ ತಿರುಗಿದೆ.
"ಆಡಳಿತಾರೂಢ ಬಿಜೆಪಿ ಜಾತಿ ಗಣತಿಯನ್ನು ವಿರೋಧಿಸುವ ಮೂಲಕ ಸಂಸದರ ವೈಯಕ್ತಿಕ ಜಾತಿಯನ್ನು ನಿಂದಿಸಲು ಕೆಲಸಕ್ಕೆ ಇಳಿದಿದೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಹೇಳಿಕೆಯನ್ನು ಪಕ್ಷ ಸಮರ್ಥಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಬೆಂಬಲವೂ ಇದೆ. ಜಾತಿ ಗಣತಿ ಒಂದು ಸೂಕ್ಷ್ಮ ವಿಚಾರವಾಗಿದೆ. ಒಬಿಸಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯನಿರ್ವಾಹಕ ಚಂದನ್ ಯಾದವ್ ಈಟಿವಿ ಭಾರತ್‌ಗೆ ತಿಳಿಸಿದರು.
ಇದನ್ನೂ ಓದಿ: 'ಚಕ್ರವ್ಯೂಹ'ದಲ್ಲಿ ಅಭಿಮನ್ಯುವಿನಂತೆ ಯುವಕರು, ಮಹಿಳೆಯರನ್ನು ಸಿಲುಕಿಸಿ ಭಯದ ವಾತಾವರಣ ಸೃಷ್ಟಿ: ರಾಹುಲ್ - Rahul Gandhi