ನವದೆಹಲಿ: ಲಂಚ ಮತ್ತು ವಂಚನೆ ಆರೋಪದ ಮೇಲೆ ಅಮೆರಿಕದಲ್ಲಿ ಸಿರಿವಂತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಆರೋಪ ಹೊರಿಸಲಾಗಿದ್ದು, ತಕ್ಷಣವೇ ಅವರನ್ನು ಬಂಧಿಸಬೇಕು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಒತ್ತಾಯಿಸಿದರು.
ಸೌರಶಕ್ತಿ ಯೋಜನೆ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 2,100 ಕೋಟಿ ರೂಪಾಯಿ ಲಂಚ ನೀಡಿದ ಆರೋಪದ ಬೆನ್ನಲ್ಲೇ, ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಉದ್ಯಮಿ ಅದಾನಿ ಭಾರತೀಯ ಮತ್ತು ಅಮೆರಿಕನ್ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಕೋರಿದರು.
ಪ್ರಧಾನಿ ನರೇಂದ್ರ ಮೋದಿ ಅವರ ‘ಏಕ್ ಹೈ ತೋ ಸೇಫ್ ಹೇ’ ಘೋಷಣೆಗೆ ವ್ಯಂಗ್ಯವಾಡಿದ ಗಾಂಧಿ, ಪ್ರಧಾನಿ ಮತ್ತು ಅದಾನಿ ಒಟ್ಟಿಗೆ ಇರುವವರೆಗೂ ಈ ಎಲ್ಲ ಆರೋಪಗಳು ನಿರರ್ಥಕ. ಭಾರತದಲ್ಲಿ ಅದಾನಿಯನ್ನು ಬಂಧಿಸುವುದಿಲ್ಲ ಮತ್ತು ತನಿಖೆ ನಡೆಸುವುದಿಲ್ಲ ಎಂದು ನಾನು ಗ್ಯಾರಂಟಿ ನೀಡಬಲ್ಲೆ. ಕಾರಣ, ಮೋದಿ ಸರ್ಕಾರ ಉದ್ಯಮಿಯ ಬೆನ್ನಿಗಿದೆ ಎಂದು ಆರೋಪಿಸಿದರು.
ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪ: ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ರಾಹುಲ್ ಗಾಂಧಿ ಹೇಳಿದರು. ಈ ವಿಚಾರದಲ್ಲಿ ಎಲ್ಲ ವಿಪಕ್ಷಗಳು ಒಟ್ಟಾಗಿದ್ದು, ಜಂಟಿಯಾಗಿ ಈ ವಿಷಯದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಅದಾನಿ ಗ್ರೂಪ್‌ನ ಅವ್ಯವಹಾರಗಳ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಮತ್ತೊಮ್ಮೆ ಮಂಡಿಸಲಾಗುವುದು. ಪ್ರಧಾನಿ ಮೇಲಿದ್ದ ವಿಶ್ವಾಸಾರ್ಹತೆ ನಾಶವಾಗಿದೆ. ಅದಾನಿ ಮತ್ತು ಪ್ರಧಾನಿ ಒಂದೇ ಎಂದು ಇಡೀ ದೇಶಕ್ಕೆ ತಿಳಿದಿದೆ. ನಾವು ಅವರ ಜಾಲವನ್ನು ಬಯಲು ಮಾಡುತ್ತೇವೆ ಎಂದು ಗುಡುಗಿದರು.
ಭಾರತ ಅದಾನಿ ಹಿಡಿತದಲ್ಲಿದೆ. ಅದಾನಿ ದೇಶವನ್ನು ನಿಯಂತ್ರಿಸುತ್ತಿದ್ದಾರೆ. ಪ್ರಧಾನಿ ಮತ್ತು ಅದಾನಿಯ ರಾಜಕೀಯ - ಹಣಕಾಸು- ಅಧಿಕಾರಶಾಹಿ ಜಾಲವನ್ನು ಭೇದಿಸುತ್ತೇವೆ. ದೇಶದ ರಾಜಕೀಯ ವ್ಯವಸ್ಥೆಯನ್ನು ಹಣದಿಂದ ನಿಯಂತ್ರಿಸಲಾಗುತ್ತಿದೆ. ಉದ್ಯಮಿಯ ಲಾಭಕ್ಕಾಗಿ ದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ಇದು ದೇಶಕ್ಕೆ ಸಮಸ್ಯೆಯಾಗಿದೆ ಎಂದು ವಿಪಕ್ಷ ನಾಯಕ ಆರೋಪಿಸಿದರು.
ಸೆಬಿ ಅಧ್ಯಕ್ಷರ ವಿಚಾರಣೆ ನಡೆಸಿ: ಉದ್ಯಮಿ ಅದಾನಿಯಂತೆ, ವಂಚನೆ ಮಾಡಿರುವ ಸೆಬಿ ಅಧ್ಯಕ್ಷ ಮಾಧವಿ ಪುರಿ ಬುಚ್ ಅವರನ್ನೂ ವಿಚಾರಣೆ ನಡೆಸಲು ರಾಹುಲ್ ಗಾಂಧಿ ಒತ್ತಾಯಿಸಿದರು. ಮಾಧವಿ ಅವರನ್ನು ಸೆಬಿ ಅಧ್ಯಕ್ಷೆ ಸ್ಥಾನದಿಂದ ತೆಗೆದು ಹಾಕಬೇಕು. ಅಕ್ರಮ ಹೂಡಿಕೆ ಆರೋಪದಲ್ಲಿ ಅವರ ವಿರುದ್ಧ ತನಿಖೆಯಾಗಬೇಕು ಎಂದು ಅವರು ಮತ್ತೊಮ್ಮೆ ಆಗ್ರಹಿಸಿದರು.
ಇದನ್ನೂ ಓದಿ: ಸೌರಶಕ್ತಿ ಯೋಜನೆಗೆ ಲಂಚ ನೀಡಿಲ್ಲ, ಆರೋಪದ ವಿರುದ್ಧ ಕಾನೂನು ಹೋರಾಟ: ಅದಾನಿ ಗ್ರೂಪ್