ರಾಯ್ಬರೇಲಿ (ಉತ್ತರ ಪ್ರದೇಶ): ಲೋಕಸಭಾ ಚುನಾವಣೆ ಹಿನ್ನೆಲೆ ರಾಯ್‌ಬರೇಲಿಯಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಿವಾಹದ ಬಗ್ಗೆ ಪ್ರಸ್ತಾಪ ಮಾಡಿದರು. ಸಾರ್ವಜನಿಕ ಸಭೆಯಲ್ಲಿ ನಿಮ್ಮ ಮದುವೆ ಪ್ಲಾನ್ ಏನು? ಯಾವಾಗ ಮದುವೆ ಆಗುತ್ತೀರಿ ಎಂಬ ಪ್ರಶ್ನೆ ಗುಂಪಿನಲ್ಲಿ ತೂರಿ ಬಂತು. ಈ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಲು ಮುಂದಾಗುತ್ತಿದ್ದಂತೆ ಕೊಂಚವೂ ತಡವರಿಸದೇ, ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, "ಜಲ್ದಿ ಹೈ ಕರ್ನಿ ಪಡೆಗೀ" (ನಾನು ಶೀಘ್ರದಲ್ಲೇ ಮದುವೆಯಾಗಬೇಕು) ಎಂದರು.
ಅದಕ್ಕೂ ಮುನ್ನ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಯ್ಬರೇಲಿಯೊಂದಿಗಿನ ನಮ್ಮ ಸಂಬಂಧ 100 ವರ್ಷಗಳಿಗಿಂತ ಹಳೆಯದು. ನನ್ನ ಕುಟುಂಬದವರಾದ ಜವಾಹರಲಾಲ್ ನೆಹರು ತಮ್ಮ ರಾಜಕೀಯ ಜೀವನವನ್ನು ಇಲ್ಲಿಂದಲೇ ಪ್ರಾರಂಭಿಸಿದರು. ಹಾಗಾಗಿ ನಮ್ಮ-ನಿಮ್ಮ ಸಂಬಂಧ ಬಹಳ ವರ್ಷಗಳ ಹಿಂದಿನದ್ದು. ನಾನು ರಾಯ್ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಲವಾದ ಕಾರಣವೂ ಇದೆ. ನಾವು ಗೆದ್ದರೆ ಸಂವಿಧಾನ ಬದಲಿಸುತ್ತೇವೆಂದು ಬಿಜೆಪಿ ನಾಯಕರು ಹೇಳಿಕೊಂಡು ಬರುತ್ತಿದ್ದಾರೆ. ಅಂತಹ ಘಟನೆ ನಡೆಯಬಾರದು. ಹಾಗಾಗಿ, ಕ್ಷೇತ್ರದ ಜನ ಅವರಿಗೆ ತಕ್ಕ ಉತ್ತರ ನೀಡಬೇಕು ಎಂದು ಕೇಂದ್ರ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
-
Asked about marriage plans during UP rally, Rahul Gandhi says "will have to marry soon"
— ANI Digital (@ani_digital) May 13, 2024
Read @ANI Story | https://t.co/bxuMlAnVZ4#RahulGandhi #PriyankaGandhi #Congress pic.twitter.com/FSkNdA4bIU
ಇದು ನನ್ನ ಇಬ್ಬರು ತಾಯಂದಿರ ಕೆಲಸದ ಸ್ಥಳವೂ ಹೌದು. ರಾಯ್ಬರೇಲಿ ಜನರು ಇಂದು ಬಹಳ ಉತ್ಸಾಹದಿಂದ ಕೂಡಿದ್ದೀರಿ, ಧನ್ಯವಾದಗಳು. ಅಲ್ಲದೇ ನನ್ನ ಪ್ರಚಾರದ ಉದ್ದಕ್ಕೂ ನನ್ನ ಬೆಂಬಲವಾಗಿ ನಿಂತಿರುವ ನನ್ನ ಸಹೋದರಿಗೂ ಧನ್ಯವಾದ ಎಂದರು.
ಸಭೆ ಬಳಿಕ ಅವರು ಮನೆ ಮನೆಗೂ ತೆರಳಿ ಜನರ ಅಭಿಪ್ರಾಯ ಪಡೆದರು. ಈ ವೇಳೆ ಸಹೋದರಿ ಪ್ರಿಯಾಂಕಾ ಗಾಂಧಿ ತಮ್ಮ ಸಹೋದರ ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಿದರು. ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ರಾಯ್ಬರೇಲಿಗೆ ಭೇಟಿ ನೀಡಿದ್ದರಿಂದ ಸಾವಿರಾರು ಜನ ಪ್ರಚಾರದಲ್ಲಿ ಭಾಗಿಯಾಗಿದ್ದರು.
ರಾಯ್ಬರೇಲಿಗೆ ತೆರಳುವ ಮುನ್ನ ರಾಹುಲ್ ತಮ್ಮ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ನಮನ ಸಲ್ಲಿಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಕ್ಷೇತ್ರ ಅಮೇಥಿ ಜೊತೆಯಲ್ಲೇ ಕೇರಳದ ವಯನಾಡಿನಿಂದಲೂ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದರು. ಈ ಪೈಕಿ ಅಮೇಥಿಯಲ್ಲಿ ಸೋತರೆ, ವಯನಾಡಿನಲ್ಲಿ ಗೆಲುವು ಸಾಧಿಸಿದ್ದರು. 2024ರ ಚುನಾವಣೆಯಲ್ಲಿಯೂ ರಾಹುಲ್ ಗಾಂಧಿ ಎರಡು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಯನಾಡಿನ ಜೊತೆಗೆ ರಾಯ್ಬರೇಲಿಯಿಂದಲೂ ಕಣಕ್ಕಿಳಿದಿದ್ದು ಭರ್ಜರಿ ಪ್ರಚಾರ ನಡೆಸಿದ್ದಾರೆ. ಅಮೇಥಿ ಕ್ಷೇತ್ರವನ್ನು ತಮ್ಮ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಅವರಿಗೆ ಬಿಟ್ಟುಕೊಟ್ಟಿದ್ದು ಬಿಜೆಪಿಯಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಬಳೆ ತೊಟ್ಟಿಲ್ಲ ಅಂದ್ರೆ ಭಾರತ ತೊಡಿಸುತ್ತದೆ: ಫಾರೂಕ್ ಅಬ್ದುಲ್ಲಾ ಹೇಳಿಕೆಗೆ ಮೋದಿ ತಿರುಗೇಟು - PM Modi