ನವದೆಹಲಿ: ಲೋಕಸಭೆ ಚುನಾವಣೆ ಸಿದ್ಧತೆಯಲ್ಲಿರುವ ಕಾಂಗ್ರೆಸ್ ಪಕ್ಷ ನಿರುದ್ಯೋಗಿಗಳು, ಯುವಕರು, ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ. ಅದರ ಕರಡು ಪ್ರತಿ ಸಿದ್ಧವಾಗಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯ ಬಳಿಕ ಅಂತಿಮಗೊಳ್ಳಲಿದೆ. ಜೊತೆಗೆ ಇಂದು (ಬುಧವಾರ) ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 10 ಚುನಾವಣಾ ಭರವಸೆಗಳನ್ನು ಘೋಷಿಸಲಿದ್ದಾರೆ.
ಮಧ್ಯಪ್ರದೇಶದ ಬದ್ನಾವರ್ ಜಿಲ್ಲೆಯಲ್ಲಿ ಕಾಂಗ್ರೆಸ್ ರ್ಯಾಲಿ ಹಮ್ಮಿಕೊಂಡಿದ್ದು, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಅದರಲ್ಲಿ ನಿರುದ್ಯೋಗಿಗಳು, ಯುವಕರನ್ನು ಉದ್ದೇಶಿಸಿ ಹತ್ತು ಭರವಸೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಯುವಕರು ಮತ್ತು ಮಹಿಳೆಯರನ್ನು ಕೇಂದ್ರೀಕರಿಸಿ ಚುನಾವಣಾ ಪ್ರಣಾಳಿಕೆ ಸಿದ್ಧ ಮಾಡುತ್ತಿದೆ ಎಂದು ಹೇಳಲಾಗಿದೆ. ಅದರ ಮೊದಲ ಭಾಗವನ್ನು ಇಂದಿನ ಕಾರ್ಯಕ್ರಮದಲ್ಲಿ ರಾಹುಲ್ ಬಹಿರಂಗ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಸಿಇಸಿ ಸಭೆ: ಬಿಜೆಪಿ 195 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅದಕ್ಕೆ ಟಕ್ಕರ್ ನೀಡಲು ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳ ಅಖೈರಿಗೆ ಕಸರತ್ತು ನಡೆಸುತ್ತಿದೆ. ಇದರ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಸಭೆ ನಡೆಯುವ ಸಾಧ್ಯತೆ ಇದೆ.
ಇದೇ ವೇಳೆ ಚುನಾವಣೆಯಲ್ಲಿ ಮತದಾರರ ಸೆಳೆಯಲು ಕಾಂಗ್ರೆಸ್ ಸಮಿತಿಯು ಕರಡು ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಅದನ್ನು ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಕರಡು ವರದಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಲಿದ್ದಾರೆ.
"ಕರಡು ಪ್ರಣಾಳಿಕೆ ಸಿದ್ಧವಾಗಿದೆ. ಈಗ ಅದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಂದೆ ಬರಲಿದೆ. ಚರ್ಚೆಯ ಬಳಿಕ ಪ್ರಣಾಳಿಕೆ ಅಂತಿಮವಾಗಲಿದೆ. ನಂತರ ಅದನ್ನು ಬಿಡುಗಡೆ ಮಾಡಲಾಗುವುದು. ನಾಳೆ ನಾವು ಈ ಕರಡನ್ನು ನಮ್ಮ ಅಧ್ಯಕ್ಷರಿಗೆ ಹಸ್ತಾಂತರಿಸಲಿದ್ದೇವೆ" ಎಂದು ಚಿದಂಬರಂ ತಿಳಿಸಿದ್ದಾರೆ.
ಎಂಎಸ್‌ಪಿಗೆ ಕಾನೂನು ಮಾನ್ಯತೆ, ಉದ್ಯೋಗ ಹಕ್ಕು: ಎಂಎಸ್‌ಪಿಗೆ ಕಾನೂನು ಮಾನ್ಯತೆ ನೀಡಬೇಕು ಎಂದು ರೈತರು ನಡೆಸುತ್ತಿರುವ ಹೋರಾಟವನ್ನು ಗಮನದಲ್ಲಿಟ್ಟುಕೊಂಡು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಬೇಡಿಕೆಯನ್ನು ಈಡೇರಿಸುವ ಭರವಸೆ ಪ್ರಣಾಳಿಕೆಯಲ್ಲಿದೆ ಎಂದು ತಿಳಿದುಬಂದಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ಎಂಎಸ್‌ಪಿಗೆ ಕಾನೂನು ಖಾತರಿ ನೀಡುವುದಾಗಿ ಈ ಹಿಂದೆಯೇ ಪಕ್ಷ ಹೇಳಿತ್ತು. ದೇಶಾದ್ಯಂತ ಜಾತಿ ಗಣತಿ, ಯುವಕರು ಉದ್ಯೋಗ ಪಡೆಯುವ ಹಕ್ಕು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಭರವಸೆ ನೀಡಿದೆ.
ಚುನಾವಣಾ ಪ್ರಚಾರಕ್ಕೆ ವೇಗ ನೀಡಲು ಕಾಂಗ್ರೆಸ್ 1 ಲಕ್ಷ ಬೂತ್ ಮಟ್ಟದ ಏಜೆಂಟರನ್ನು (ಬಿಎಲ್‌ಎ) ನೇಮಿಸಿದೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಾ.7ರಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ: ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಅಭ್ಯರ್ಥಿಗಳ ಘೋಷಣೆ ನಿರೀಕ್ಷೆ