ರಾಮಗಢ( ಜಾರ್ಖಂಡ್): ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಬೊಕಾರೊ ಮೂಲಕ ರಾಮಗಢ ತಲುಪಿದೆ. ಜಿಲ್ಲೆಯ ಮಗನ್‌ಪುರದಿಂದ ಗೋಲಾ ಡಿವಿಸಿ ಚೌಕ್‌ವರೆಗೆ ತೆರೆದ ಜೀಪಿನಲ್ಲಿ ರಾಹುಲ್ ಗಾಂಧಿ ಜನರೊಂದಿಗೆ ಬೆರತರು, ಅವರ ಸಮಸ್ಯೆಗಳನ್ನು ಆಲಿಸಿದರು. ಇದಾದ ನಂತರ ಸಿಡೋ ಕನ್ಹು ಜಿಲ್ಲೆಯ ಮೈದಾನ್ ಬಜಾರ್ ತಾಂಡ್‌ಗೆ ತೆರಳಿ ಭಾನುವಾರ ರಾತ್ರಿ ರಾಮಗಢದಲ್ಲೇ ತಂಗಿದರು.
ಫೆಬ್ರವರಿ 5 ರಂದು ಅಂದರೆ ಇಂದು ರಾಹುಲ್ ಗಾಂಧಿ ಅವರು ಸಿಡೋ ಕನ್ಹು ಜಿಲ್ಲಾ ಮೈದಾನದಿಂದ ಕಾಲ್ನಡಿಗೆಯಲ್ಲಿ ಚಟ್ಟಿ ಬಜಾರ್ ಗಾಂಧಿ ಚೌಕ್‌ಗೆ ತಲುಪಲಿದ್ದಾರೆ. ಅಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ. ಇದಾದ ಬಳಿಕ ನಗರದ ಸುಭಾಷ್ ಚೌಕ್ ಗೆ ಅವರು ಭೇಟಿ ನೀಡಲಿದ್ದಾರೆ. ಅಲ್ಲಿಯೂ ಸುಭಾಷ್ ಚಂದ್ರ ಬೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಯಾತ್ರೆ ಮುಂದುವರೆಸಲಿದ್ದಾರೆ. ಇದಾದ ನಂತರ ಅವರ ನ್ಯಾಯ ಯಾತ್ರೆಯು ರಾಮಗಢ ಬಸ್ ನಿಲ್ದಾಣ, ಬ್ಲಾಕ್ ಚೌಕ್, ಟೈರ್ ಮೋಡ್ ಮೂಲಕ ಕಂಕೆಬಾರ್ ಬೈಪಾಸ್, NH 33 ಮೂಲಕ ರಾಂಚಿಗೆ ಸಾಗಲಿದೆ. ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಅಪಾರ ಪ್ರಮಾಣದ ಕಾಂಗ್ರೆಸ್ ಕಾರ್ಯಕರ್ತರು, ಅವರ ಬೆಂಬಲಿಗರು ಭಾರಿ ಸಿದ್ಧತೆ ನಡೆಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ನಗರದ ಸಂಚಾರ ಮಾರ್ಗದಲ್ಲಿ ಭಾರಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ: ಭಾನುವಾರ ಸಂಜೆ ಡಿವಿಸಿ ಚೌಕ್‌ನಲ್ಲಿ ರಾಹುಲ್ ಗಾಂಧಿ ಅವರನ್ನು ನೋಡಲು ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಕೈಯಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ತೆರೆದ ಜೀಪಿನ ಮೇಲೆ ನಿಂತು ರಾಹುಲ್ ಗಾಂಧಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ದ್ವೇಷವನ್ನು ಹರಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಂಚಿಯ ಶಹೀದ್ ಮೈದಾನದಲ್ಲಿ ರಾಹುಲ್ ಸಭೆ: ರಾಹುಲ್ ಗಾಂಧಿ ಅವರು ಭಾರತ್ ಜೋಡೋ ನ್ಯಾಯ ಯಾತ್ರೆಯ ಅಂಗವಾಗಿ ರಾಂಚಿಯ ಹೆಚ್ ಇಸಿಯ ಶಹೀದ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಎಚ್‌ಇಸಿ ಪ್ರದೇಶದ ಶಹೀದ್ ಮೈದಾನದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಎರಡು ದಶಕಗಳ ಹಿಂದೆ ಎಚ್‌ಇಸಿ ಉಳಿಸಿ ಎಂದು ಸೋನಿಯಾ ಗಾಂಧಿ ಭಾಷಣ ಮಾಡಿದ್ದರು.
ಇದನ್ನು ಓದಿ: ಜಾರ್ಖಂಡ್ ಸರ್ಕಾರವನ್ನ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ; ರಾಹುಲ್ ಗಾಂಧಿ