ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಳೆ (ಮೇ 14) ಝಾನ್ಸಿ ಲೋಕಸಭಾ ಕ್ಷೇತ್ರದಿಂದ ಕಣದಲ್ಲಿರುವ ಮಾಜಿ ಕೇಂದ್ರ ಸಚಿವ ಪ್ರದೀಪ್ ಜೈನ್ ಪರ ಪ್ರಚಾರ ನಡೆಸಲಿದ್ದಾರೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಇಂಡಿಯಾ ಒಕ್ಕೂಟದ ಪ್ರತಿನಿಧಿಯಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಮೇ 14 ರಂದು ಝಾನ್ಸಿಯಲ್ಲಿ ಜಂಟಿ ರ‍್ಯಾಲಿ ನಡೆಸಲಿದ್ದಾರೆ. ಇದು ರಾಜ್ಯದಲ್ಲಿ ಅವರ ಐದನೇ ಜಂಟಿ ರ‍್ಯಾಲಿಯಾಗಿದೆ. ಜನರು ಈ ಬಾರಿ ಬದಲಾವಣೆ ಬಯಸಿದ್ದು, ಇಂಡಿಯಾ ಒಕ್ಕೂಟಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮೇ 20 ರಂದು ಮತದಾನ ನಡೆಯಲಿರುವ ಬಂದಾ, ಹಮೀರ್‌ಪುರ್ ಮತ್ತು ಜಲೌನ್ ಈ ಮೂರು ಸಂಸದೀಯ ಸ್ಥಾನಗಳನ್ನು ಗುರಿಯಾಗಿಸಿಕೊಂಡು ಝಾನ್ಸಿಯು ಬುಂದೇಲ್ಖಂಡ್ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಾಗುತ್ತದೆ ಎಂದು ಉತ್ತರ ಪ್ರದೇಶದ ಎಐಸಿಸಿ ಉಸ್ತುವಾರಿ ಅವಿನಾಶ್ ಪಾಂಡೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪ್ರದೀಪ್ ಜೈನ್ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಝಾನ್ಸಿಯಿಂದ ಗೆಲುವು ಕಂಡಿದ್ದು, ಇದೀಗ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಹ ಸಲ್ಲಿರುವ ಜೈನ್ ಅವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಬುಂದೇಲ್‌ಖಂಡ್ ಅಭಿವೃದ್ಧಿಗಾಗಿ 7,000 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ಸಹಾಯವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ವಿಭಜಿಸಲಾದ ಇಡೀ ಬುಂದೇಲ್‌ಖಂಡಕ್ಕೆ ಅವಶ್ಯವಾಗಿತ್ತು. ಆದರೆ, ಬದಲಾದ ರಾಜಕೀಯ ಸ್ಥಿತ್ಯಂತರದಿಂದ ಯುಪಿಯಲ್ಲಿ ಆಗಿನ ಬಿಎಸ್‌ಪಿ ಸರ್ಕಾರ ಮತ್ತು ಈಗಿನ ಕೇಂದ್ರ ಬಿಜೆಪಿ ಸರ್ಕಾರ ಈ ಪ್ಯಾಕೇಜ್ ಅನ್ನು ದುರುಪಯೋಗಪಡಿಸಿಕೊಂಡಿದೆ. ಹಿಂದುಳಿದ ಬುಂದೇಲ್‌ಖಂಡವನ್ನು ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಜೈನ ಸಮುದಾಯದ ಪ್ರದೀಪ್ ತಮ್ಮದೇಯಾದ ಮತದಾರರನ್ನು ಹೊಂದಿದ್ದು, ಈ ಬಾರಿ ಮತ್ತೆ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಝಾನ್ಸಿ ಈ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, 2014 ಮತ್ತು 2019 ರಲ್ಲಿ ಬಿಜೆಪಿ ಎರಡು ಬಾರಿ ಸತತ ಗೆಲುವು ಸಾಧಿಸುವ ಮೂಲಕ ಝಾನ್ಸಿಯನ್ನು ತನ್ನ ಕ್ಷೇತ್ರವನ್ನಾಗಿಸಿಕೊಂಡಿದೆ. 2024ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಅನುರಾಗ್ ಶರ್ಮಾ ಕಣದಲ್ಲಿರುವುದರಿಂದ ಕ್ಷೇತ್ರ ಉಭಯ ನಾಯಕರ ಪ್ರಚಾರ ಪೈಪೋಟಿಗೆ ಕಾರಣವಾಗಿದೆ. ಕಮಲ ಪಡೆ ಕ್ಷೇತ್ರವನ್ನು ಮತ್ತೆ ಗೆಲ್ಲುವ ಉತ್ಸಾಹದಲ್ಲಿದ್ದರೆ, ಕೇಸರಿ ಪಕ್ಷವನ್ನು ಎದುರಿಸಲು ಇಂಡಿಯಾ ಒಕ್ಕೂಟ ಬಲ ಪ್ರದರ್ಶನಕ್ಕೆ ಮುಂದಾಗಿದೆ. ಬಿಎಸ್ಪಿ ಪಕ್ಷದಿಂದ ಹೊಸ ಮುಖ ರವಿ ಪ್ರಕಾಶ್ ಕುಶ್ವಾಹ ಅವರನ್ನು ಕಣಕ್ಕಿಳಿದಿದ್ದರಿಂದ ಝಾನ್ಸಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.