ತರ್ನ್ ತರನ್ (ಪಂಜಾಬ್): ಯುವತಿಯೊಂದಿಗೆ ಮಗ ಓಡಿ ಹೋಗಿ ಮದುವೆಯಾದ ಕಾರಣಕ್ಕೆ ಆತನ 55 ವರ್ಷದ ತಾಯಿ ಮೇಲೆ ಹಲ್ಲೆ ಮಾಡಿ, ಅರೆಬೆತ್ತಲೆಯಾಗಿ ಮೆರವಣಿಗೆ ನಡೆಸಿರುವ ಘಟನೆ ಅಮಾನವೀಯ ಘಟನೆ ಪಂಜಾಬ್ನ ತರ್ನ್ ತರನ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಕೆಲ ದಿನಗಳ ಸಂತ್ರಸ್ತೆಯ ಮಗ ಯುವತಿಯೊಬ್ಬಳ ಜೊತೆಗೆ ಓಡಿಹೋಗಿದ್ದ. ಈ ಯುವತಿಯ ಕುಟುಂಬಸ್ಥರ ವಿರೋಧದ ನಡುವೆಯೇ ಆಕೆಯನ್ನು ಮದುವೆಯಾಗಿದ್ದ. ಆದ್ದರಿಂದ ಯುವತಿ ಕುಟುಂಬ ಸದಸ್ಯರು ಮಾರ್ಚ್ 31ರಂದು ಯುವಕ ತಾಯಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣಾಧಿಕಾರಿ ಸುನೀತಾ ಬಾವಾ ಮಾಹಿತಿ ನೀಡಿದ್ದು, ಈ ಘಟನೆ ಕುರಿತು ಸಂತ್ರಸ್ತೆ ದೂರು ನೀಡಿದ್ದಾರೆ. ಈ ದೂರಿನ ಪ್ರಕಾರ, ಸಂತ್ರಸ್ತೆ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯ ಮಗನ ಅತ್ತೆ-ಮಾವನ ಕಡೆಯವರು ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲ, ಆಕೆಯನ್ನು ಅರೆಬೆತ್ತಲೆ ಸ್ಥಿತಿಯಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಸಂತ್ರಸ್ತೆಯನ್ನು ಪರೇಡ್ ನಡೆಸುತ್ತಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎಂದು ತಿಳಿಸಿದರು.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಒಟ್ಟಾರೆ ಐವರ ಪೈಕಿ ನಾಲ್ವರನ್ನು ಶನಿವಾರ ಬಂಧಿಸಲಾಗಿದೆ. ಯುವತಿಯ ತಾಯಿ ಕುಲ್ವಿಂದರ್ ಕೌರ್ ಮಣಿ, ಆಕೆಯ ಸಹೋದರರಾದ ಶರಣಜಿತ್ ಸಿಂಗ್ ಶಾನಿ ಮತ್ತು ಗುರುಚರಣ್ ಸಿಂಗ್ ಮತ್ತು ಕುಟುಂಬದ ಸ್ನೇಹಿತ ಸನ್ನಿ ಸಿಂಗ್ ಎಂಬುವವರೇ ಬಂಧಿತರು. ಈಗಾಗಲೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೆರವಣಿಗೆಯ ವಿಡಿಯೋ ಮಾಡಲು ಬಳಸಲಾದ ಮೊಬೈಲ್ ಫೋನ್ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಪ್ರಕರಣದ ಐದನೇ ಆರೋಪಿಯನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಏಪ್ರಿಲ್ 3ರಂದು ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಮೇಲೆ ಆಕ್ರಮಣ ಅಥವಾ ಕ್ರಿಮಿನಲ್ ಬಲ), 354ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಮಹಿಳೆಗೆ ಕ್ರಿಮಿನಲ್ ಬಲದ ಆಕ್ರಮಣ ಅಥವಾ ಬಳಕೆ), 354ಡಿ (ಹಿಂಬಾಲಿಸುವಿಕೆ), 323 (ಸ್ವಯಂಪ್ರೇರಿತವಾಗಿ ಗಾಯವನ್ನುಂಟುಮಾಡುವುದು) ಮತ್ತು 149 (ಕಾನೂನುಬಾಹಿರ ಸಭೆ)ರಡಿ ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಗುಂಡು ಹಾರಿಸಿ ದರೋಡೆ: ಆರೋಪಿಗಳ ಬಂಧನ