ಬರೇಲಿ(ಉತ್ತರ ಪ್ರದೇಶ): ಒಂದೇ ಮಾದರಿಯಲ್ಲಿ ಹಲವು ಕೊಲೆ ಮಾಡಿದ್ದ ಬರೇಲಿಯ ನಟೋರಿಯಸ್ ಸೈಕೋ ಕಿಲ್ಲರ್ ಓರ್ವನನ್ನು ಇಲ್ಲಿನ ಪೊಲೀಸರು ಹರಸಾಹಸಪಟ್ಟು ಬಂಧಿಸಿದ್ದಾರೆ. ಈ ಮೂಲಕ ಆರು ಮಹಿಳೆಯರ ಹತ್ಯೆಗೈದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಬಕರ್‌ಗಂಜ್ ಗ್ರಾಮದ ನಿವಾಸಿ ಕುಲದೀಪ್ (35) ಬಂಧಿತ ಸೈಕೋ ಕಿಲ್ಲರ್. ಈತನನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಆಗ ತಾನು ಆರು ಮಹಿಳೆಯರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ.
ಒಂದೇ ವರ್ಷದಲ್ಲಿ ಶಾಹಿ ಮತ್ತು ಶಿಶ್‌ಗಢ ಎಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಹಿಳೆಯರನ್ನು ಸೀರೆಯಿಂದ ಕತ್ತು ಹಿಸುಕಿ ಒಂದೇ ಮಾದರಿಯಲ್ಲಿ ಕೊಲೆ ಮಾಡಲಾಗಿತ್ತು. ಈ ಸುದ್ದಿ ಸಂಚಲನ ಉಂಟು ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಆರೋಪಿಗಳ ಪತ್ತೆಗೆ 22 ತಂಡಗಳನ್ನು ರಚಿಸಿ ಶೋಧ ನಡೆಸುತ್ತಿದ್ದರು. 1,500 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದರು. ಶಂಕಿತ ಸರಣಿ ಕೊಲೆಗಾರನ ರೇಖಾಚಿತ್ರವನ್ನೂ ಬಿಡುಗಡೆ ಮಾಡಲಾಗಿತ್ತು.
ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಅನುಮಾನದಿಂದ ಕುಲದೀಪ್ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಈ ವೇಳೆ ತಾನು ಆರು ಮಹಿಳೆಯರನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆತ ಬಿಚ್ಚಿಟ್ಟ ಕೊಲೆಯ ಭೀಕರತೆಯನ್ನು ಕೇಳಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
''ಸರಣಿ ಹಂತಕ ಕುಲದೀಪ್ ಮೂಲತಃ ನವಾಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಕರ್‌ಗಂಜ್ ಗ್ರಾಮದ ನಿವಾಸಿ. ಗುರುವಾರ ತಡರಾತ್ರಿ ಆತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನು ಒಂದು ವರ್ಷದಲ್ಲಿ ಆರು ಮಹಿಳೆಯರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ'' ಎಂದು ಅನುರಾಗ್ ಆರ್ಯ ತಿಳಿಸಿದರು.
''ತಾಯಿ ಬದುಕಿರುವಾಗಲೇ ತನ್ನ ತಂದೆ ಎರಡನೇ ಮದುವೆ ಮಾಡಿಕೊಂಡಿದ್ದರಿಂದ, ಮಲತಾಯಿ ಕಿರುಕುಳ ನೀಡುತ್ತಿದ್ದರು. ಹೆತ್ತ ತಾಯಿಯ ಸಾವಿನ ಚಿಂತೆಯಿಂದ ಕುಲದೀಪ್ ತನ್ನ ವರ್ತನೆಯನ್ನು ಬದಲಿಸಿಕೊಂಡಿದ್ದ. ತನ್ನ ನಿಜವಾದ ತಾಯಿ ತನ್ನ ಮಲತಾಯಿಯಿಂದಲೇ ಸಾವನ್ನಪ್ಪಿದ್ದಾಳೆಂದು ನಂಬಿದ್ದ. ಇದಾದ ನಂತರ ತನ್ನ ಮಲತಾಯಿಯ ವಯಸ್ಸಿನ ಮಹಿಳೆಯರನ್ನು ದ್ವೇಷಿಸಲು ಆರಂಭಿಸಿದ. 2014ರಲ್ಲಿ ಮದುವೆ ಕೂಡಾ ಆಗಿದ್ದ. ಆದರೆ, ಹಿಂಸಾತ್ಮಕ ವರ್ತನೆಯಿಂದಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ. ಇದಾದ ನಂತರ ಆತನ ಮಹಿಳೆಯರ ಮೇಲಿನ ಕ್ರೂರತೆ ಮತ್ತಷ್ಟು ಹೆಚ್ಚಾಗಿತ್ತು. ಡ್ರಗ್ಸ್ ಸೇವಿಸುತ್ತಿದ್ದ. ಕಳೆದ ಒಂದೂವರೆ ವರ್ಷದಿಂದ ಸೈಕೋ ಕಿಲ್ಲರ್ ಆಗಿ ತಿರುಗಾಡುತ್ತಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದೆ'' ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
''ತನ್ನ ಸಂಬಂಧಿಕರೊಂದಿಗೆ ಶಾಹಿ ಮತ್ತು ಶಿಶ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಆತ, ದಿನವಿಡೀ ಕಾಲ್ನಡಿಗೆಯಲ್ಲೇ ತಿರುಗಾಡುತ್ತಿದ್ದ. ಈ ವೇಳೆ ಒಬ್ಬಂಟಿಯಾಗಿ ಸಿಗುತ್ತಿದ್ದ ಮಹಿಳೆಯರನ್ನು ಸಹಜವಾಗಿಯೇ ಮಾತನಾಡಿಸುತ್ತಾ ಅವರ ವೈಯಕ್ತಿಯ ವಿಚಾರ ಕೇಳುತ್ತಿದ್ದ. ಬಳಿಕ ಲೈಂಗಿಕತೆಗೆ ಸಹಕರಿಸುವಂತೆ ಕೇಳುತ್ತಿದ್ದ. ನಿರಾಕರಿಸಿದ ತಕ್ಷಣ ಸಿಟ್ಟಿನಲ್ಲಿ ಸೀರೆಯಿಂದ ಕತ್ತು ಹಿಸುಕಿ ಅವರ ಕೊಲೆ ಮಾಡುತ್ತಿದ್ದ. ಕೊಲೆ ಬಳಿಕ ಪರಾರಿಯಾಗುತ್ತಿದ್ದ ಕಿಲ್ಲರ್, ಕೆಲವು ದಿನಗಳ ಕಾಲ ಆ ಜಾಗದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರಲಿಲ್ಲ. ಬೇರೆ ಬೇರೆ ಕಡೆಗಳಿಂದ ಒಬ್ಬಂಟಿಯಾಗಿ ಕೆಲಸಕ್ಕೆ ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ'' ಎಂದು ಆರ್ಯ ತಿಳಿಸಿದ್ದಾರೆ.
''ಶಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ್‌ಪುರ, ಕುಲ್ಚಾ ಗ್ರಾಮ, ಖಾರ್ಸೈನಿ ಗ್ರಾಮ ಮತ್ತು ಶಿಶ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಖಿಂಪುರ, ಜಗದೀಶ್‌ಪುರ, ಗುಜಿಯಾ ಜಾಗೀರ್‌ನಲ್ಲಿ ಮಹಿಳೆಯರ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಶಾಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಗೀಡಾದ ಎಲ್ಲಾ ಮಹಿಳೆಯರ ವಯಸ್ಸು 45ರಿಂದ 65 ವರ್ಷ. ಮಹಿಳೆಯರನ್ನು ಕೊಂದ ನಂತರ, ಅವರಿಂದ ಬೆಲೆ ಬಾಳುವ ವಸ್ತುಗಳನ್ನು ಎಗರಿಸುತ್ತಿದ್ದ ಬಗ್ಗೆಯೂ ವಿಚಾರಣೆ ವೇಳೆ ಗೊತ್ತಾಗಿದೆ. ಸದ್ಯ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ'' ಎಂದ ಅನುರಾಗ್ ಆರ್ಯ, ಈ ಹಿಂದೆ ನಡೆದಿರುವ ಕೊಲೆಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಕೆಲಸ ಕೊಡಿಸುವ ಆಮಿಷ: ಕೋರ್ಟ್ನ ತಮ್ಮ ಚೇಂಬರ್ನಲ್ಲೇ ವಕೀಲನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ - women rape allegation