ನವದೆಹಲಿ: ನೀಟ್-ಯುಜಿ 2024ರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಜತೆಗೆ, ವಿದ್ಯಾರ್ಥಿಗಳ ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮಾತನಾಡಿದ್ದು, ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. "ಇಂದು, ದೇಶಾದ್ಯಂತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಹೋದ್ಯೋಗಿಗಳು ನೀಟ್ ಪರೀಕ್ಷೆಯ ಹಗರಣದ ವಿರುದ್ಧ ಪ್ರತಿಭಟಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶೈಕ್ಷಣಿಕ ಹಗರಣಗಳು ನಡೆಯುತ್ತಿವೆ. ಇದು ದೇಶದ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತಿದೆ. ಈ ಭ್ರಷ್ಟಾಚಾರದ ಆಟವನ್ನು ಕೂಡಲೇ ನಿಲ್ಲಬೇಕು. ನೀಟ್ ಪರೀಕ್ಷೆಯ ಹಗರಣಕ್ಕೆ ಸಂಬಂಧಿಸಿದಂತೆ ತಕ್ಷಣ, ಕಠಿಣ ಕ್ರಮ ಕೈಗೊಳ್ಳುವ ಮೂಲಕ 24 ಲಕ್ಷ ಯುವಕರಿಗೆ ನ್ಯಾಯ ಸಿಗುವಂತೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ '' ಎಂದು ತಿಳಿಸಿದರು.
ರಾಹುಲ್ ಗಾಂಧಿ ಕೂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ದನಿ ಎತ್ತಿದ್ದಾರೆ. "ನೀಟ್‌ಗೆ ಹಾಜರಾದ ಸಾವಿರಾರು ವಿದ್ಯಾರ್ಥಿಗಳೀಗ ಬಿಸಿಲಿನ ತಾಪದಲ್ಲಿ ಕುಟುಂಬದೊಂದಿಗೆ ಬೀದಿಗಿಳಿದಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಮಾತ್ರ ಇದನ್ನು ಮೌನವಾಗಿ ವೀಕ್ಷಿಸುತ್ತಿದ್ದಾರೆ. ಜನರ ಈ ಹೋರಾಟದಲ್ಲಿ, ಬೀದಿಗಳಿಂದ ಸಂಸತ್ತಿನವರೆಗೆ ಭಾರತ ನಿಮ್ಮೊಂದಿಗೆ ಇದೆ ಎಂಬುದಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಅವರು ಘೋಷಿಸಿದ್ದಾರೆ.
ಕಾಂಗ್ರೆಸ್ ನಾಯಕ ತಮ್ಮ ಅಧಿಕೃತ ಖಾತೆಯಲ್ಲಿ ವಿಡಿಯೋವನ್ನೂ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಹುಲ್, ನೀಟ್ ಪರೀಕ್ಷೆಯ ಸಮಸ್ಯೆಗಳ ಬಗ್ಗೆ ದನಿ ಎತ್ತಿದ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ನೀಟ್-ಯುಜಿ ವಿವಾದ: ಕೌನ್ಸೆಲಿಂಗ್ ಪ್ರಕ್ರಿಯೆ ಮುಂದೂಡಲು ಸುಪ್ರೀಂ ಕೋರ್ಟ್ ನಕಾರ - NEET UG 2024
ವಿಡಿಯೋದಲ್ಲಿ, "ಕಳೆದ 7 ವರ್ಷಗಳಲ್ಲಿ 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪರಿಣಾಮ, ಎರಡು ಕೋಟಿ ಯುವಕರು ತೊಂದರೆ ಎದುರಿಸಿದ್ದಾರೆ. ನಾವು ಒಟ್ಟಾಗಿ ಹೋರಾಡುತ್ತೇವೆ. ಈ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ. ಸರ್ಕಾರಕ್ಕೆ ನಿಮ್ಮನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಪ್ರತಿಪಕ್ಷಗಳು ರಕ್ಷಿಸುತ್ತವೆ. ನಾನು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತೇನೆ, ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ'' ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷಾ ಅಕ್ರಮವು ಕೇಂದ್ರ ಸರ್ಕಾರದ ಬಹುದೊಡ್ಡ ಹಗರಣ: ಡಾ.ಶರಣಪ್ರಕಾಶ್ ಪಾಟೀಲ್ - NEET Exam Row
ಇನ್ನು, ನೀಟ್-ಯುಜಿ 2024ರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೇ ಮೊದಲ ವಾರ ನಡೆದ ಪರೀಕ್ಷೆಯ ರದ್ಧತಿ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸೇರಿ ಇತರರಿಗೆ ನೋಟಿಸ್ ಜಾರಿ ಮಾಡಿದೆ.