ನವದೆಹಲಿ: ಹೆಸರಾಂತ ಲೇಖಕಿ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸುಧಾ ಮೂರ್ತಿ ಅವರ ಹೆಸರನ್ನು ರಾಷ್ಟ್ರಪತಿಗಳು ಇಂದು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಧಾ ಮೂರ್ತಿ ಕೊಡುಗೆ ಅಪಾರ- ಮೋದಿ: 'ಭಾರತದ ರಾಷ್ಟ್ರಪತಿಗಳು ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜ ಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ ಹಾಗೂ ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಗೆ ಸುಧಾ ಮೂರ್ತಿ ನಾಮನಿರ್ದೇಶನ ನಮ್ಮ ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಪೂರಕವಾಗಿದೆ'' ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜ್ಯಸಭೆಗೆ 12 ಸದಸ್ಯರನ್ನು ರಾಷ್ಟ್ರಪತಿ ನೇರವಾಗಿ ನಾಮನಿರ್ದೇಶನ ಮಾಡುತ್ತಾರೆ.
-
I am delighted that the President of India has nominated @SmtSudhaMurty Ji to the Rajya Sabha. Sudha Ji's contributions to diverse fields including social work, philanthropy and education have been immense and inspiring. Her presence in the Rajya Sabha is a powerful testament to… pic.twitter.com/lL2b0nVZ8F
— Narendra Modi (@narendramodi) March 8, 2024
ಸದ್ಯ ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರ ಪೈಕಿ ಒಂದು ಸ್ಥಾನ ಖಾಲಿ ಉಳಿದಿತ್ತು. ಈ ಸ್ಥಾನಕ್ಕೆ ಇನ್ಫೋಸಿಸ್ ಸಹ ಸಂಸ್ಥಾಪಕಿಯೂ ಆಗಿರುವ ಸುಧಾ ಮೂರ್ತಿ ಅವರನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕರ್ನಾಟಕದಿಂದ ನಾಮ ನಿರ್ದೇಶನಗೊಂಡಿರುವ ಇನ್ನೋರ್ವ ರಾಜ್ಯಸಭೆ ಸದಸ್ಯರು. 2022ರ ಜುಲೈ 7ರಂದು ಹೆಗ್ಗಡೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.
ದೇಶದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಲೇಖಕಿಯಾಗಿಯೂ ಕೂಡ ಛಾಪು ಮೂಡಿಸಿದವರು. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಸುಧಾ ಮೂರ್ತಿ ಅಳಿಯ. ಸಮಾಜ ಸೇವೆ ಕ್ಷೇತ್ರದಲ್ಲಿನ ನೀಡಿದ ಕೊಡುಗೆ ಪರಿಗಣಿಸಿ ಸುಧಾ ಮೂರ್ತಿಗೆ ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಭೂಷಣ ಪ್ರಶಸ್ತಿ ನೀಡಿದ್ದರು. 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.
ಇದನ್ನೂ ಓದಿ: ಮಹಿಳಾ ದಿನಕ್ಕೆ ಪ್ರಧಾನಿ ಮೋದಿ ಗಿಫ್ಟ್! ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹100 ಇಳಿಕೆ
ಬಿಜೆಪಿ ನಾಯಕರಿಂದ ಅಭಿನಂದನೆ: ಸಮಾಜ ಸೇವೆ, ಶಿಕ್ಷಣ, ಸಾಹಿತ್ಯ ವಲಯದಲ್ಲಿ ಅಪೂರ್ವ ಸೇವೆಗೈದು ದೇಶದ ಜನರ ಮನೆಮಾತಾಗಿರುವ ರಾಜ್ಯದ ಹೆಮ್ಮೆಯ ಸಾಧಕಿ ಸುಧಾಮೂರ್ತಿ ಅವರು ವಿಶ್ವ ಮಹಿಳಾ ದಿನಾಚರಣೆಯ ದಿನದಂದು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಕನ್ನಡಿಗರಿಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ರಾಜ್ಯ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿ, ಸುಧಾಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ, ಸಮಾಜಸೇವೆ, ಲೋಕೋಪಕಾರ, ಶಿಕ್ಷಣ, ಉದ್ಯಮಶೀಲತೆ, ಗ್ರಂಥ ಲೇಖನ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ನಮ್ಮೆಲ್ಲರ ಅಭಿಮಾನದ ಸಾಧಕಿ ಸುಧಾಮೂರ್ತಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವುದು ಅತ್ಯಂತ ಹೆಮ್ಮೆ, ಸಂತಸಗಳನ್ನು ತಂದಿದೆ. ಸರಳತೆ, ಸಜ್ಜನಿಕೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವದ ಸುಧಾಮೂರ್ತಿ ಅವರಿಗೆ ಅಭಿನಂದನೆಗಳ ಜೊತೆಗೆ ರಾಜ್ಯಸಭೆಯಲ್ಲಿ ಕೂಡ ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆಯ ಸುದಿನದಂದು ದೇಶದ ಮಹಿಳಾ ಶಕ್ತಿಗೆ ಪ್ರೇರಣೆಯಾಗಿರುವ ಸುಧಾ ಮೂರ್ತಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವುದು ಅತ್ಯಂತ ಖುಷಿ ತಂದಿದ್ದು, ಸುಧಾಮೂರ್ತಿಯವರಿಗೆ ತುಂಬು ಹೃದಯದ ಅಭಿನಂದನೆಗಳು. ಅವರು ಗೃಹಿಣಿಯಾಗಿ, ಉದ್ಯಮಿಯಾಗಿ, ಶಿಕ್ಷಣ ಪ್ರೇಮಿಯಾಗಿ, ಸಾಹಿತಿಯಾಗಿ, ಸಮಾಜ ಸೇವೆ ಮಾಡುತ್ತಿದ್ದು, ತಮ್ಮ ಸರಳತೆ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದು, ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾರಿಶಕ್ತಿಗೆ ನೀಡಿರುವ ದೊಡ್ಡ ಗೌರವವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪೋಸ್ಟ್ ಮಾಡಿದ್ದಾರೆ.
ಸುಧಾಮೂರ್ತಿ ಅವರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ತಿಳಿಯಲು ನಾನು ರೋಮಾಂಚನಗೊಂಡಿದ್ದೇನೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣಕ್ಕೆ ಸುಧಾಮೂರ್ತಿಯವರ ಗಮನಾರ್ಹ ಕೊಡುಗೆಗಳನ್ನು ಗುರುತಿಸಲು ಇದು ಸಾಕ್ಷಿಯಾಗಿದೆ. ಈ ನಾಮನಿರ್ದೇಶನವು ನಮ್ಮ ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ನಿಜವಾಗಿಯೂ 'ನಾರಿ ಶಕ್ತಿ'ಯ ಸಾರವನ್ನು ಒಳಗೊಂಡಿದೆ. ಅವರು ಸಂಸತ್ತಿನ ಅವಧಿಯನ್ನು ಯಶಸ್ವಿಯಾಗಿ ಮುಗಿಸಲಿ ಎಂದು ಹಾರೈಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಇನ್ನಷ್ಟು ಕೆಲಸ ಮಾಡಲು ದೊಡ್ಡ ವೇದಿಕೆ ಸಿಗುತ್ತಿರುವುದಕ್ಕೆ ಸಂತಸವಾಗ್ತಿದೆ: ಸುಧಾ ಮೂರ್ತಿ