ಅಯೋಧ್ಯೆ (ಉತ್ತರ ಪ್ರದೇಶ): ಭವ್ಯ ರಾಮ ಮಂದಿರದಲ್ಲಿ ನಾಳೆ (ಜನವರಿ 22) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ನಂತರ ದೇಗುಲವನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ. ದಿವ್ಯ ಕಾರ್ಯಕ್ರಮದ ಹಿನ್ನೆಲೆ ನಗರದಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ.
ಪ್ರಾಣ ಪ್ರತಿಷ್ಠಾನ ಸಮಾರಂಭವು ಮಧ್ಯಾಹ್ನ 12.15 ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ಮೋದಿ ಅವರು ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ ಬಳಿಕ ಆಹ್ವಾನಿತ 7,000ಕ್ಕೂ ಹೆಚ್ಚು ಗಣ್ಯರು ಮತ್ತು ಜನಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಸರ್ಕಾರ, ಬಿಜೆಪಿ ಆಡಳಿತದ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ರಜೆ ಘೋಷಿಸಿವೆ. ಕೋಟ್ಯಂತರ ಜನರು ಟಿವಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲಿದ್ದಾರೆ.
ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ವಿಧಿವಿಧಾನಗಳು ಜನವರಿ 16 ರಿಂದ ಪ್ರಾರಂಭವಾಗಿವೆ. ನಾಳೆ ಸೋಮವಾರ ಬಹುನಿರೀಕ್ಷಿತ ಪ್ರಾಣ ಪ್ರತಿಷ್ಠಾನದ ಬಳಿಕ, ವಿರಾಜಮಾನನಾದ ರಾಮನ ದರ್ಶನಕ್ಕೆ ಜನರಿಗೆ ಅವಕಾಶ ಸಿಗಲಿದೆ.
ಐತಿಹಾಸಿಕ ಕಾರ್ಯಕ್ರಮ ವೇಳಾಪಟ್ಟಿ ಇಲ್ಲಿದೆ
- ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ನಡೆಯುತ್ತಿರುವ ಧಾರ್ಮಿಕ ಕ್ರಿಯೆಗಳ ಭಾಗವಾಗಿ ಬೆಳಗ್ಗೆಯೇ ಹವನ್ ಕುಂಡ್ ಅರ್ಪಣೆ ಮಾಡಲಾಗುತ್ತದೆ.
- ಪ್ರಾಣ ಪ್ರತಿಷ್ಠಾಪನೆಯ ಆಹ್ವಾನಿತರಿಗೆ ಬೆಳಗ್ಗೆ 9 ಗಂಟೆಗೆ ಬರಲು ಅವಕಾಶ ನೀಡಲಾಗಿದೆ. ಭದ್ರತೆ ಹಿನ್ನೆಲೆ ಅತಿಥಿಗಳಿಗೆ ವಿವಿಧ ಸಾಲುಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.25ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ತಲುಪಲಿದ್ದಾರೆ. ಬೆಳಗ್ಗೆ 10.55ಕ್ಕೆ ರಾಮಮಂದಿರ ತಲುಪಲಿದ್ದಾರೆ.
- ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಮಧ್ಯಾಹ್ನ 12:15 ರಿಂದ 12:45 ರ ನಡುವೆ ಜರುಗಲಿದೆ.
- ಮಧ್ಯಾಹ್ನ 12:20 ಕ್ಕೆ ಪ್ರಧಾನಿ ಶ್ರೀರಾಮನ ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆಯಲಿದ್ದಾರೆ. ನಂತರ ಆರತಿ ಬೆಳಗುತ್ತಾರೆ.
- ಮೋದಿ ಅವರು ಪ್ರಭು ರಾಮನ ಮೊದಲ ದರ್ಶನ ಪಡೆದ ನಂತರ, ಮಧ್ಯಾಹ್ನ 1:00 ಗಂಟೆಯಿಂದ ಇತರ ಭಕ್ತರಿಗೆ ಒಬ್ಬೊಬ್ಬರಾಗಿ ದರ್ಶನಕ್ಕೆ ಅವಕಾಶ ಸಿಗಲಿದೆ.
- ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
- ಮಧ್ಯಾಹ್ನ 2:15ಕ್ಕೆ ಕುಬೇರ ತಿಲದಲ್ಲಿರುವ ಶಿವ ದೇವಾಲಯದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ.
- ಸುಮಾರು 4 ಗಂಟೆಗಳ ಕಾಲ ಪ್ರಧಾನಿ ಅಯೋಧ್ಯೆಯಲ್ಲಿ ತಂಗಲಿದ್ದಾರೆ.
ದರ್ಶನ ಮತ್ತು ಆರತಿ ಸಮಯ: ಜನವರಿ 23 ರಿಂದ ರಾಮಮಂದಿರದ ಬಾಗಿಲು ಭಕ್ತರಿಗಾಗಿ ತೆರೆಯುತ್ತದೆ. ದರ್ಶನದ ಸಮಯ ಎರಡು ಹಂತಗಳಲ್ಲಿ ಇರಲಿದೆ.
- ಬೆಳಗ್ಗೆ: 7:00 ರಿಂದ 11:30
- ಮಧ್ಯಾಹ್ನ: 02:00 ರಿಂದ ಸಂಜೆ 07:00
ಪ್ರತಿದಿನ ಮೂರು ಬಾರಿ ರಾಮನಿಗೆ ಆರತಿ
- ಬೆಳಗ್ಗೆ 06:30ಕ್ಕೆ ಶೃಂಗಾರ ಆರತಿ
- ಮಧ್ಯಾಹ್ನ 12:00 ಕ್ಕೆ ಭೋಗ್ ಆರತಿ
- ಸಂಜೆ 07:30 ಕ್ಕೆ ಸಂಧ್ಯಾ ಆರತಿ
ಆರತಿ ಪಾಸ್‌ಗಳನ್ನು ಬುಕ್ ಮಾಡುವುದು ಹೇಗೆ
ಲಭ್ಯತೆಯ ಆಧಾರದ ಮೇಲೆ ಭಕ್ತರು ಆನ್‌ಲೈನ್ ಅಥವಾ ದೇವಸ್ಥಾನದಲ್ಲಿ ಆರತಿ ಪಾಸ್‌ಗಳನ್ನು ಬುಕ್ ಮಾಡಬಹುದು. ಅದರ ಪ್ರಕ್ರಿಯೆಯು ಹೀಗಿರುತ್ತದೆ
- ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಪಾಸ್ಗಾಗಿ ಲಾಗಿನ್ ಆಗಲು ನಿಮ್ಮ ಮೊಬೈಲ್ಗೆ ಒಟಿಪಿ ಸಂಖ್ಯೆ ಬರಲಿದೆ.
- ಆರತಿ ಅಥವಾ ದರ್ಶನಕ್ಕಾಗಿ ಸ್ಲಾಟ್ ಅನ್ನು ಬುಕ್ ಮಾಡಲು 'ಮೈ ಪ್ರೊಫೈಲ್'ಗೆ ನ್ಯಾವಿಗೇಟ್ ಮಾಡಿ.
- ಬಯಸಿದ ದಿನಾಂಕ ಮತ್ತು ಆರತಿ ಸಮಯವನ್ನು ಆರಿಸಿಕೊಳ್ಳಿ
- ಅಗತ್ಯ ರುಜುವಾತುಗಳನ್ನು ಒದಗಿಸಿ.
- ಆರತಿ ಸಮಾರಂಭದ ಮೊದಲು ದೇವಾಲಯದ ಆವರಣದಲ್ಲಿರುವ ಕೌಂಟರ್‌ನಿಂದ ನಿಮ್ಮ ಪಾಸ್ ಅನ್ನು ಸಂಗ್ರಹಿಸಿ.
ಇದನ್ನೂ ಓದಿ: ಶ್ರೀರಾಮನ ವನವಾಸಕ್ಕೂ ದಾವಣಗೆರೆಗೂ ಇದೆ ನಂಟು; ಸೀತೆಯ ದಾಹ ನೀಗಿಸಲು ಬಾಣದಿಂದ ಗಂಗೆ ಹರಿಸಿದ್ದ ಶ್ರೀರಾಮ