ನವದೆಹಲಿ: ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರನ್ನು ಸಿಪಿಐ (ಎಂ) ಪಕ್ಷದ ಪಾಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿಯ ಸಂಯೋಜಕರನ್ನಾಗಿ ನೇಮಿಸಲಾಗಿದೆ. ಮುಂದಿನ ವರ್ಷದ ಎಪ್ರಿಲ್ನಲ್ಲಿ ನಡೆಯಲಿರುವ ಪಕ್ಷದ 24ನೇ ಕಾರ್ಯಕಾರಿ ಸಮಿತಿ ಸಭೆಯವರೆಗೆ ಮಧ್ಯಂತರ ವ್ಯವಸ್ಥೆಯಾಗಿ ಕಾರಟ್ ಅವರನ್ನು ನೇಮಿಸಲಾಗಿದೆ ಎಂದು ಸಿಪಿಐ (ಎಂ) ರವಿವಾರ ತಿಳಿಸಿದೆ. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀತಾರಾಮ್ ಯೆಚೂರಿ ಸೆಪ್ಟೆಂಬರ್ 12 ರಂದು ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
"ಪ್ರಸ್ತುತ ನವದೆಹಲಿಯಲ್ಲಿ ನಡೆಯುತ್ತಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಕೇಂದ್ರ ಸಮಿತಿಯ ಸಭೆಯಲ್ಲಿ, ಮಧುರೈನಲ್ಲಿ 2025 ರ ಏಪ್ರಿಲ್ ನಲ್ಲಿ ನಡೆಯಲಿರುವ ಪಕ್ಷದ 24ನೇ ಕಾರ್ಯಕಾರಿ ಸಮಿತಿಯ ಸಭೆಯವರೆಗೆ ಮಧ್ಯಂತರ ವ್ಯವಸ್ಥೆಯಾಗಿ ಕಾಮ್ರೇಡ್ ಪ್ರಕಾಶ್ ಕಾರಟ್ ಅವರನ್ನು ಪೊಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿಯ ಸಂಯೋಜಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ" ಎಂದು ಸಿಪಿಐ (ಎಂ) ತಿಳಿಸಿದೆ.
ಸಿಪಿಐ (ಎಂ) ನ ಹಿರಿಯ ನಾಯಕರಲ್ಲಿ ಒಬ್ಬರಾದ ಕಾರಟ್ 2005 ರಿಂದ 2015 ರವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ಅವರು ಯೆಚೂರಿ ಅವರಿಗೆ ಪಕ್ಷದ ಅಧಿಕಾರವನ್ನು ಹಸ್ತಾಂತರಿಸಿದರು. ಕಾರಟ್ 1985 ರಲ್ಲಿ ಕೇಂದ್ರ ಸಮಿತಿಗೆ ಆಯ್ಕೆಯಾಗಿದ್ದರು ಮತ್ತು 1992 ರಲ್ಲಿ ಪಾಲಿಟ್ ಬ್ಯೂರೋ ಸದಸ್ಯರಾಗಿ ಆಯ್ಕೆಯಾಗಿದ್ದರು. ಪೊಲಿಟ್ ಬ್ಯೂರೋ ಇದು ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವಿಭಾಗವಾಗಿದೆ.
ಈಗ ಪಕ್ಷದ ಪ್ರಮುಖ ಹುದ್ದೆಗೇರಿರುವ ಕಾರಟ್, ಬಿಜೆಪಿಯನ್ನು ಸೋಲಿಸುವ ಪಕ್ಷದ ಪ್ರಯತ್ನದಲ್ಲಿ ಕಾಂಗ್ರೆಸ್ ನೊಂದಿಗೆ ಯಾವುದೇ ಚುನಾವಣಾ ಹೊಂದಾಣಿಕೆಯನ್ನು ತಪ್ಪಿಸಲು ಸಿಪಿಐ (ಎಂ) ನ ರಾಜಕೀಯ ನಿಲುವುಗಳನ್ನು ಮಾರ್ಪಡಿಸಲಿದ್ದಾರೆಯೇ ಎಂಬುದನ್ನು ಕುತೂಹಲದಿಂದ ನೋಡಬೇಕಾಗಿದೆ.
ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಒಟ್ಟುಗೂಡಿಸುವ ಯೆಚೂರಿ ಅವರ ಸಲಹೆಯನ್ನು ಕಾರಟ್ ವಿರೋಧಿಸಿದ್ದರು. "ಫ್ಯಾಸಿಸ್ಟ್" ಬಿಜೆಪಿಯನ್ನು ಸೋಲಿಸಲು ಎಲ್ಲಾ "ಜಾತ್ಯತೀತ ಮತ್ತು ಪ್ರಜಾಪ್ರಭುತ್ವ" ಶಕ್ತಿಗಳನ್ನು ಒಟ್ಟುಗೂಡಿಸಬೇಕು ಎಂದು ಯೆಚೂರಿ ಅಂತಿಮವಾಗಿ ಪ್ರತಿಪಾದಿಸಿದ್ದರಿಂದ ಸಿಪಿಐ (ಎಂ) ನಲ್ಲಿ ಆಂತರಿಕವಾಗಿ ಈ ವಿಚಾರ ಭಾರಿ ವಿವಾದ ಸೃಷ್ಟಿಸಿತ್ತು.
ಕಾರಟ್ ಅವರು 2015 ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮೂರು ಅವಧಿಗಳನ್ನು ಪೂರ್ಣಗೊಳಿಸಿದ್ದಾರೆ ಮಾತ್ರವಲ್ಲದೆ, ಅವರು 75 ವರ್ಷ ವಯಸ್ಸು ದಾಟಿದ್ದಾರೆ. ಸಿಪಿಐ (ಎಂ) ಪ್ರಕಾರ, 75 ವರ್ಷಕ್ಕಿಂತ ಮೇಲ್ಪಟ್ಟ ನಾಯಕರು ತಮ್ಮ ಅಧಿಕಾರಾವಧಿಯ ಕೊನೆಯಲ್ಲಿ ತಾವು ಪ್ರತಿನಿಧಿಸುವ ಸಮಿತಿಗಳಿಂದ ನಿರ್ಗಮಿಸಬೇಕಾಗುತ್ತದೆ.
ಇದನ್ನೂ ಓದಿ : ಜನವರಿ 12ರಿಂದ ಕುಂಭಮೇಳ: 30 ಕೋಟಿ ಭಕ್ತರ ಆಗಮನ ನಿರೀಕ್ಷೆ, 992 ವಿಶೇಷ ರೈಲು ಓಡಿಸಲು ಸಿದ್ಧತೆ - Kumbh Mela