ಥಾಣೆ (ಮಹಾರಾಷ್ಟ್ರ): ಮಾದಕ ದ್ರವ್ಯ ದಂಧೆಕೋರರನ್ನು ಬಂಧಿಸಲು ತೆರಳಿದ್ದ ಪೊಲೀಸ್ ತಂಡದ ಮೇಲೆ ಸುಮಾರು 20 ಜನರ ಗುಂಪೊಂದು ದಾಳಿ ನಡೆಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಓರ್ವ ಮಹಿಳಾ ಕಾನ್‌ಸ್ಟೇಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಧಾವಗಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಅಬ್ಬಾಸ್ ಅಲಿ ಮಿರ್ಜಾ, ಅಂಕುರ್ ಭಾರತಿ ಮತ್ತು ರಾಜು ಗೌತಮ್ ಎಂದು ಗುರುತಿಸಲಾಗಿದೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಉತ್ತನ್ ಸಾಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೀರಾ ಭಾಯಂದರ್-ವಸಾಯಿ ವಿರಾರ್ ಪೊಲೀಸ್ ಕಮಿಷನರೇಟ್‌ನ ಆಂಟಿ ನಾರ್ಕೋಟಿಕ್ ಸೆಲ್ (ಎಎನ್‌ಸಿ)ನ ಪೊಲೀಸ್ ತಂಡವು ಡ್ರಗ್ ದಂಧೆಕೋರರನ್ನು ಬಂಧಿಸಲು ತೆರಳಿತ್ತು. ಈ ಪೊಲೀಸ್ ತಂಡದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಐವರು ಸಿಬ್ಬಂದಿಯನ್ನು ಒಳಗೊಂಡಿತ್ತು. ಆದರೆ, ರಾತ್ರಿ 9 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಬಿದಿರಿನ ಬಂಬುಗಳಿಂದ ಪೊಲೀಸ್ ತಂಡದ ಮೇಲೆ ದಾಳಿ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆಯಲ್ಲಿ ಗಾಯಗೊಂಡ ಮಹಿಳಾ ಕಾನ್ಸ್ಟೇಬಲ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ಈ ದಾಳಿಯಲ್ಲಿ ತಂಡದ ಇತರ ಸದಸ್ಯರಿಗೂ ಗಾಯಗಳಾಗಿವೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 (ಸಾರ್ವಜನಿಕ ಸೇವಕರನ್ನು ಕರ್ತವ್ಯ ನಿರ್ವಹಿಸದಂತೆ ತಡೆಯುವ ಅಪರಾಧ ಶಕ್ತಿಯ ಆಕ್ರಮಣ ಅಥವಾ ಬಳಕೆ), 354 (ಮಹಿಳೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಕ್ರಿಮಿನಲ್ ಬಲದ ಬಳಕೆ), 143 (ಕಾನೂನುಬಾಹಿರ ಸಭೆ), 147 (ಗಲಭೆ), 504 (ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಸೇರಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಪುಣೆಯಲ್ಲಿ ಬೃಹತ್ ಕಾರ್ಯಾಚರಣೆ: ಕೆಲ ಇತ್ತೀಚೆಗಷ್ಟೇ ಪುಣೆಯಲ್ಲಿ ಅಕ್ರಮ ಮಾದಕವಸ್ತು ವಿರುದ್ಧ ಪೊಲೀಸರು ಬೃಹತ್ ಕಾರ್ಯಾಚರಣೆ ಕೈಗೊಂಡು ಸುಮಾರು 1,100 ಕೋಟಿ ರೂಪಾಯಿ ಮೌಲ್ಯದ 600 ಕೆಜಿ ಡ್ರಗ್ ಜಪ್ತಿ ಮಾಡಿದ್ದರು. ಸೋಮವಾರ ಮೂವರು ಆರೋಪಿಗಳ ಬಂಧನದ ನಂತರ ಈ ಭಾರಿ ಮೊತ್ತದ ಮಾದಕವಸ್ತು ಪತ್ತೆಯಾಗಿತ್ತು.
ಇದನ್ನೂ ಓದಿ: ಪುಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ: 1,100 ಕೋಟಿ ಮೌಲ್ಯದ 600 ಕೆಜಿ ಮಾದಕವಸ್ತು ಜಪ್ತಿ