ಸೆರಾಂಪೋರ್ (ಪಶ್ಚಿಮ ಬಂಗಾಳ): ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗವಾಗಿದ್ದು, ನಾವು ಅದನ್ನು ಮರಳಿ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸೆರಾಂಪೋರ್‌ನಲ್ಲಿಂದು ಚುನಾವಣಾ ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕಣಿವೆ ನಾಡಿನಲ್ಲಿ ಶಾಂತಿ ನೆಲೆಸಿದೆ. ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ. ಕಾಶ್ಮೀರದಲ್ಲಿ ಮೊದಲು ಆಜಾದಿಯ ಘೋಷಣೆಗಳು ಕೇಳಿಬರುತ್ತಿದ್ದವು. ಈಗ ಅದೇ ಘೋಷಣೆಗಳು ಪಿಒಕೆಯಲ್ಲಿ ಕೇಳಿಬರುತ್ತಿವೆ. ಈ ಹಿಂದೆ ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆದಿತ್ತು, ಈಗ ಪಿಒಕೆಯಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ಅಮಿತ್ ಶಾ ತಿಳಿಸಿದರು.
ಮಣಿಶಂಕರ್ ಅಯ್ಯರ್ ಅವರಂತಹ ಕಾಂಗ್ರೆಸ್ ನಾಯಕರು ಪಾಕಿಸ್ತಾನವನ್ನು ಗೌರವಿಸಬೇಕು ಮತ್ತು ಅವರ ಬಳಿ ಪರಮಾಣು ಬಾಂಬ್ ಇದೆ ಎಂದು ಹೇಳುತ್ತಾರೆ. ಆದರೆ, ಈ ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದೆ ಮತ್ತು ನಾವು ಅದನ್ನು ತೆಗೆದುಕೊಳ್ಳುತ್ತೇವೆ ಎಂದು ನಾನು ಅವರಿಗೆ ಹೇಳಲು ಇಚ್ಛಿಸುತ್ತೇನೆ ಎಂದರು.
ಪ್ರಸ್ತುತ ಲೋಕಸಭೆ ಚುನಾವಣೆಯು 'ಇಂಡಿಯಾ' ಮೈತ್ರಿಕೂಟದ ಭ್ರಷ್ಟ ನಾಯಕರು ಮತ್ತು ಮುಖ್ಯಮಂತ್ರಿ, ಪ್ರಧಾನಿಯಾಗಿದ್ದರೂ ತಮ್ಮ ವಿರುದ್ಧ ಒಂದು ಪೈಸೆಯ ಅಕ್ರಮ ಆರೋಪವನ್ನೂ ಹೊಂದದ ಪ್ರಾಮಾಣಿಕ ರಾಜಕಾರಣಿ ನರೇಂದ್ರ ಮೋದಿ ನಡುವಿನ ಆಯ್ಕೆಯಾಗಿದೆ. ಅಲ್ಲದೇ, ನುಸುಳುಕೋರರು ಬೇಕೋ ಅಥವಾ ನಿರಾಶ್ರಿತರಿಗೆ ಸಿಎಎ ಬೇಕೋ?, ಜಿಹಾದ್‌ಗೆ ಮತ ಹಾಕಬೇಕೆ ಅಥವಾ ವಿಕಾಸ್‌ಗೆ ಮತ ಹಾಕಬೇಕೆ ಎಂದು ಬಂಗಾಳದ ಜನತೆ ನಿರ್ಧರಿಸಬೇಕು ಎಂದು ಅವರು ಹೇಳಿದರು. ಇದೇ ವೇಳೆ, ತಮ್ಮ ಮತ ಬ್ಯಾಂಕ್ಅನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎಯನ್ನು ವಿರೋಧಿಸುತ್ತಿದ್ದಾರೆ ಎಂದು ಅಮಿತ್ ಶಾ ದೂರಿದರು.
ಪಶ್ಚಿಮ ಬಂಗಾಳದಲ್ಲಿ 42 ಲೋಕಸಭೆ ಕ್ಷೇತ್ರಗಳು ಇವೆ. ಎಲ್ಲ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಈಗಾಗಲೇ ನಾಲ್ಕು ಹಂತಗಳ ಮತದಾನ ಪೂರ್ಣಗೊಂಡಿದೆ. ಇನ್ನೂ ಮೂರು ಹಂತಗಳ ಚುನಾವಣೆ ಬಾಕಿ ಇದೆ. ಈ ಹಿಂದಿನ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 22, ಬಿಜೆಪಿ 18 ಹಾಗೂ ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಇದನ್ನೂ ಓದಿ: ಪ್ರಧಾನಿ ಬಳಿ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ; ಇರುವುದು ಬರೀ 3.02ಕೋಟಿ ಚರಾಸ್ತಿ; ಅವರು ಓದಿದ್ದೆಷ್ಟು ಗೊತ್ತಾ?