ಅಜಂಗಢ್(ಉತ್ತರ ಪ್ರದೇಶ): ''ಉತ್ತರ ಪ್ರದೇಶ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಹೋಗುತ್ತಿದ್ದಂತೆ 'ತುಷ್ಟೀಕರಣದ ವಿಷ' ದುರ್ಬಲಗೊಳ್ಳುತ್ತಿದೆ. 2047ರ ಸಮಯಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆ ಈಡೇರಿಕೆಗೆ ನಾನು ಹೆಚ್ಚಿನ ವೇಗ ನೀಡುತ್ತಿದ್ದೇನೆ'' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕುಟುಂಬದ ಭದ್ರಕೋಟೆ ಎಂದೇ ಹೇಳಲಾಗುವ ಅಜಂಗಢ್ನಲ್ಲಿ ಇಂದು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು. ''ಒಂದು ಕುಟುಂಬವು ತನ್ನ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಅಜಂಗಢ್ನಲ್ಲಿ ಕಳೆದ ಚುನಾವಣೆಯಲ್ಲಿ ದಿನೇಶ್ (ಹಾಲಿ ಸಂಸದ) ಎಂಬ ಯುವಕ ವಿರುದ್ಧ ಸೋಲು ಕಂಡಿತ್ತು'' ಎಂದು ಲೇವಡಿ ಮಾಡಿದರು.
ಅಜಂಗಢ್ನಲ್ಲಿ ದಿ.ಮುಲಾಯಂ ಸಿಂಗ್ 2024ರಲ್ಲಿ ಗೆದ್ದಿದ್ದರು. 2019ರಲ್ಲಿ ಅಖಿಲೇಶ್ ಗೆಲುವು ಸಾಧಿಸಿದ್ದರು. ಆದರೆ, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಅಖಿಲೇಶ್ ಪ್ರವೇಶಿಸಿದ್ದರು. ನಂತರದಲ್ಲಿ ನಡೆದ ಉಪಚುನಾವಣೆಯಲ್ಲಿ ಎಸ್ಪಿ ಪಕ್ಷ ಸೋತಿತ್ತು.
'ದೇಶದ 140 ಕೋಟಿ ಜನ ಮೋದಿ ಕುಟುಂಬ': ಇದೇ ವೇಳೆ, ಮೋದಿ ಅವರಿಗೆ ಕುಟುಂಬ ಇಲ್ಲ ಎಂಬ ಆರ್ಜೆಡಿ ನಾಯಕ ಲಾಲು ಪ್ರಸಾದ್ ಹೇಳಿಕೆ ಉಲ್ಲೇಖಿಸಿದ ಪ್ರಧಾನಿ, ''ಇಂತಹ ಸೋಲುಗಳಿಂದ ಪರಿವಾರವಾದಿ ಜನರು ನಿರಾಸೆಗೊಂಡು ಮೋದಿ ಅವರನ್ನು ನಿಂದಿಸುತ್ತಿದ್ದಾರೆ. ಅವರು ಮೋದಿಗೆ ಕುಟುಂಬ ಇಲ್ಲ ಎಂದು ಹೇಳಲು ಶುರು ಮಾಡಿದ್ದಾರೆ. ಆದರೆ, ಈ ದೇಶದ 140 ಕೋಟಿ ಜನರೂ ಕೂಡ ಮೋದಿ ಕುಟುಂಬ ಎಂಬುವುದು ಅವರು ಮರೆತಿದ್ದಾರೆ'' ಎಂದು ಕುಟುಕಿದರು.
ಮುಂದುವರೆದು ಮಾತನಾಡಿದ ಮೋದಿ,''ಅಜಂಗಢವನ್ನು ಹಿಂದುಳಿದ ಪ್ರದೇಶ ಎಂದು ಪರಿಣಿಸಲಾಗುತ್ತಿತ್ತು. ಇವತ್ತು ಅದೇ ನಗರ ಹೊಳೆಯುವ ನಕ್ಷತ್ರವಾಗಿದೆ. ದೇಶದ ಪ್ರಗತಿಯಲ್ಲಿ ಹೊಸ ಅಧ್ಯಯನ ಬರೆಯುತ್ತಿದೆ. ಅಲ್ಲದೇ, ಈ ಹಿಂದೆ ಕಾಲವೊಂದಿತ್ತು. ದೆಹಲಿಯಲ್ಲಿ ಕಾರ್ಯಕ್ರಮಗಳು ನಡೆದ ಇತರ ರಾಜ್ಯಗಳು ಅಲ್ಲಿಗೆ ಬಂದು ಸೇರಬೇಕಿತ್ತು. ಇಂದು ಅಜಂಗಢ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ ವಿವಿಧ ಭಾಗಗಳ ಸಾವಿರಾರು ಜನರು ಅಜಂಗಢ್ ಜೊತೆಗೆ ಸಂಪರ್ಕ ಬೆಸೆಯುತ್ತಿದ್ದಾರೆ'' ಎಂದು ಹೇಳಿದರು.
₹34,700 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ: ಇದಕ್ಕೂ ಮುನ್ನ ಪ್ರಧಾನಿ ಮೋದಿ, 34,700 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಿದರು. ಅಜಂಗಢ, ಶ್ರವಸ್ತಿ, ಚಿತ್ರಕೂಟ್, ಅಲಿಗಢ್ ವಿಮಾನ ನಿಲ್ದಾಣಗಳು, ಲಖನೌದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟಿಸಿದರು.
ಅಜಂಗಢದಲ್ಲಿ ಸ್ಥಾಪಿಸಲಾಗಿರುವ ಮಹಾರಾಜ್ ಸುಹೇಲ್ ದೇವ್ ವಿಶ್ವವಿದ್ಯಾಲಯ, 11,500 ಕೋಟಿ ವೆಚ್ಚದ ಐದು ಪ್ರಮುಖ ಹೆದ್ದಾರಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡಿ, ಉತ್ತರ ಪ್ರದೇಶದಾದ್ಯಂತ 3,700 ಕೋಟಿ ವೆಚ್ಚದ ಪಿಎಂ ಗ್ರಾಮ ಸಡಕ್ ಯೋಜನೆಗಳ ರಸ್ತೆಗಳಿಗೆ ಚಾಲನೆ ನೀಡಿದರು. ಜೊತೆಗೆ, 8,200 ವೆಚ್ಚದ 12 ರೈಲ್ವೆ ಯೋಜನೆಗಳು ಸೇರಿ ಅನೇಕ ಯೋಜನೆಗಳಿಗೆ ಚಾಲನೆ ಕೊಟ್ಟರು.
ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ಏಕಾಂಗಿ ಸ್ಪರ್ಧೆ: ಕಾಂಗ್ರೆಸ್‌ನ ಅಧೀರ್ ರಂಜನ್ ವಿರುದ್ಧ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಕಣಕ್ಕೆ