ಕಾಜಿರಂಗ್: ಅಸ್ಸಾಂನ ಕಾಜಿರಂಗ್ ರಾಷ್ಟ್ರೀಯ ಪಾರ್ಕ್ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆನೆ ಮತ್ತು ಜೀಪ್ ಸಫಾರಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಕ್ಕೆ ಮೊದಲ ಬಾರಿ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಉದ್ಯಾನವನದ ಕೇಂದ್ರ ಖೋರಾ ವಲಯದಲ್ಲಿ ಮಿಹಿಮುಖ್ನಲ್ಲಿ ಮೊದಲು ಆನೆ ಸಫಾರಿ ಮಾಡಿ ನಂತರ ಅದೇ ವಲಯದಲ್ಲಿ ಜೀಪ್ ಸಫಾರಿ ಮಾಡಿದರು. ಈ ವೇಳೆ ಅವರ ಜೊತೆಗೆ ಪಾರ್ಕ್ನ ನಿರ್ದೇಶಕ ಸೋನಾಲಿ ಘೋಷ್ ಮತ್ತು ಇತರೆ ಅರಣ್ಯಾಧಿಕಾರಿಗಳು ಇದ್ದರು. ಎರಡು ದಿನ ಅಸ್ಸಾಂ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ಕಾಜಿರಂಗ್ಗೆ ಬಂದಿಳಿದಿರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂದು ಬೆಳಗ್ಗೆ ನಾನು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಪಾರ್ಕ್ಗೆ ಭೇಟಿ ನೀಡಿದ್ದು, ಹಚ್ಚ ಹಸಿರಿನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿ ಘೇಂಡಾ ಮೃಗ ಸೇರಿದಂತೆ ವಿವಿಧ ಗಿಡ ಮರ ಮತ್ತು ಪ್ರಾಣಿಗಳನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವಕ್ಕೆ ಭೇಟಿ ನೀಡಿ ಇಲ್ಲಿನ ಅದ್ಭುತ ಸೌಂದರ್ಯ ಮತ್ತು ಅಸ್ಸಾಂ ಜನರ ಅತಿಥ್ಯವನ್ನು ಸ್ವೀಕರಿಸುವಂತೆ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರು ಭೇಟಿ ನೀಡಲೇಬೇಕಾದ ಸ್ಥಳ ಇದು ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಇದೇ ವೇಳೆ ಮಹಿಳಾ ಫಾರೆಸ್ಟ್ ಗಾರ್ಡ್ ತಂಡದ ಜೊತೆಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ನಮ್ಮ ಕಾಡು ಮತ್ತು ವನ್ಯ ಜೀವಿಯನ್ನು ಧೈರ್ಯದಿಂದ ರಕ್ಷಿಸುವ ಪ್ರಯತ್ನದಲ್ಲಿ ಅವರು ಫಾರೆಸ್ಟ್ ಗಾರ್ಡ್ ಮುಂಚೂಣಿಯಲ್ಲಿದ್ದಾರೆ. ನಮ್ಮ ನಿಸರ್ಗದ ಪರಂಪರೆಯನ್ನು ಸಂರಕ್ಷಿಸುವಲ್ಲಿನ ಅವರ ಧೈರ್ಯ ನಿಜಕ್ಕೂ ಸ್ಫೂರ್ತಿದಾಯಕ ಎಂದಿದ್ದಾರೆ.
ತಮ್ಮ ಸಫಾರಿ ವೇಳೆ ಪ್ರದ್ಯುಮ್ನ ಮತ್ತು ಪೂಲಮೈ, ಲಕ್ಷ್ಮಿ ಎಂಬ ಆನೆಗೆ ಪ್ರಧಾನಿ ಮೋದಿ ಕಬ್ಬು ತಿನ್ನಿಸಿದ್ದಾರೆ. ಈ ಪ್ರವಾಸದ ವೇಳೆ ಅವರು 125 ಅಡಿ ಎತ್ತರದ ಜೋರ್ಹತ್ ಜಿಲ್ಲೆಯ ನಾಯಕ ಜನರಲ್ ಲಚಿತ್ ಬರ್ಫುಕನ್ ಅವರ ಶೌರ್ಯದ ಪ್ರತಿಮೆಯನ್ನು ಇಂದು ಮಧ್ಯಾಹ್ನ ಅನಾವರಣ ಮಾಡಲಿದ್ದಾರೆ.
ಬಳಿಕ ಜೋರ್ಹತ್ ಜಿಲ್ಲೆಯ ಮೆಲೆಂಗ್ ಮೆಟೆಲಿ ಪೋಥಾರ್‌ಗೆ ತೆರಳಲಿರುವ ಅವರು, ಅಲ್ಲಿ ಸುಮಾರು 18,000 ಕೋಟಿ ರೂ ವೆಚ್ಚದ ಕೇಂದ್ರ ಮತ್ತು ರಾಜ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. (ಪಿಟಿಐ)
ಇದನ್ನೂ ಓದಿ: ಇಂದು ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಪ್ರಧಾನಿ ಮೋದಿ ಭೇಟಿ; ಏನು ವಿಶೇಷತೆ?