ನವದೆಹಲಿ: ನೂತನ ಚುನಾವಣಾ ಆಯುಕ್ತರ ನೇಮಕಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಭೆ ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರ ಕಾರ್ಯ ಫೆಬ್ರವರಿ 15 ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ ಅವರ ಸ್ಥಾನಕ್ಕೆ ಮತ್ತೊಬ್ಬರ ಆಯ್ಕೆಗಾಗಿ ಇಂದು ಸಭೆ ನಡೆಯುವ ನಿರೀಕ್ಷೆಯಿದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿಯ ನಿಯಮಗಳು), ಕಾಯಿದೆ 2023 ರ ಅಡಿ ಸಭೆಯು ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಳೆದ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಕಾಯಿದೆಯ ಪ್ರಕಾರ ಇದು ವರ್ಷದ ಮೊದಲ ನೇಮಕಾತಿ ಆಗಲಿದೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ಆಯ್ಕೆ ಸಮಿತಿಯ ಭಾಗಿಯಾಗುವ ಸಾಧ್ಯತೆಯಿದೆ. ಗಮನಾರ್ಹವೆಂದರೆ, ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವಂತೆಯೇ ಪಾಂಡೆ ಅವರ ಅವಧಿ ಮುಗಿಯಲಿದೆ.
ETV ಭಾರತ್ ಈ ಕುರಿತು ಚುನಾವಣಾ ಸಮಿತಿಯ ಅಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಈ ಬಗ್ಗೆ ಯಾವಿದೇ ಮಾಹಿತಿಯನ್ನು ಹಂಚಿಕೊಳ್ಳಲು ಅಧಿಕಾರಿ ನಿರಾಕರಿಸಿದ್ದಾರೆ. ಸಭೆಯ ಬಗ್ಗೆ ಕೇಳಿದ ನಂತರ "ನೋ ಕಾಮೆಂಟ್" ಎಂದು ಹೇಳಿದ್ದಾರೆ.
ಓದಿ: 'ಇದು ರಾಜಕೀಯ ಚಳವಳಿ ಅಲ್ಲ, ಕರ್ನಾಟಕದ ಹಾಗೂ ಕನ್ನಡಿಗರ ಹಿತ ಕಾಯುವ ಚಳವಳಿ' : ಸಿಎಂ ಸಿದ್ದರಾಮಯ್ಯ
2023ರಲ್ಲಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಆಯುಕ್ತರ ನೇಮಕ ನಿಯಮ ಈಗ ಬದಲಾಗಿದೆ. ಹೊಸ ಕಾನೂನು ಜಾರಿಗೆ ಬರುವ ಮುನ್ನ ಪ್ರಧಾನಿ ಹಾಗೂ ಸಚಿವರು ಸೇರಿ ಸಭೆ ಮಾಡಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣೆ ಆಯುಕ್ತರ ಹೆಸರನ್ನು ಶಿಫಾರಸು ಮಾಡುತ್ತಿದ್ದರು. ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆಸಿ ತೆಗೆದುಕೊಂಡ ನಿರ್ಧಾರ ಹಾಗೂ ಶಿಫಾರಸಿಗೆ ರಾಷ್ಟ್ರಪತಿಯವರು ಅಂಕಿತ ಹಾಕುತ್ತಿದ್ದರು.
ಆದರೆ, ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಮೊದಲಿನ ನೇಮಕ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದರಿಂದ ಹೊಸ ಕಾನೂನು ಜಾರಿಗೆ ಬಂದಿದೆ. ಹೊಸ ನಿಯಮದಂತೆ ಚುನಾವಣಾ ಆಯುಕ್ತರ ನೇಮಕ ನಡೆಯಬೇಕಿದೆ. ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು, ಆಯ್ಕೆ ಸಮಿತಿಯ ರಚನೆ ಮಾಡಬೇಕು. ಐದು ಮಂದಿಯ ಸಮಿತಿಯನ್ನು ರಚಿಸಲು ಕೇಂದ್ರ ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಇನ್ನಿಬ್ಬರು ವ್ಯಕ್ತಿಗಳ ಸಮಿತಿಯನ್ನು ರಚಿಸಲು ಈ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಇದರ ಜತೆಗೆ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಒಬ್ಬರು ಕೇಂದ್ರ ಸಚಿವರನ್ನು ಒಳಗೊಂಡ ಸಮಿತಿಯು ಚರ್ಚೆ ನಡೆಸಿ, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ. ಕಳೆದ ಡಿಸೆಂಬರ್ನಲ್ಲಿ ಹೊಸ ಕಾಯಿದೆ ಜಾರಿಗೆ ಬಂದಿದೆ.