ನವದೆಹಲಿ: ಇಂದು ಬಿಜೆಪಿ ಬಿಡುಗಡೆ ಮಾಡಿರುವ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 34 ಮಂದಿ ಕೇಂದ್ರ ಮತ್ತು ರಾಜ್ಯಗಳ ಸಚಿವರಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೂ ಈ ಬಾರಿ ಟಿಕೆಟ್ ನೀಡಲಾಗಿದೆ. ಪಕ್ಷವನ್ನು ಗೆಲ್ಲಿಸಿ ಸಿಎಂ ಸ್ಥಾನ ಬಿಟ್ಟುಕೊಟ್ಟ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಧ್ಯಪ್ರದೇಶದ ವಿದಿಶಾದಿಂದ ಟಿಕೆಟ್ ನೀಡಲಾಗಿದೆ. ಇನ್ನು ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ದಿಬ್ರುಗಢದಿಂದ ಸ್ಪರ್ಧಿಸಲಿದ್ದಾರೆ.
ಇನ್ನೊಂದು ವಿಶೇಷ ಎಂದರೆ ಮಾಜಿ ವಿದೇಶಾಂಗ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ನವದೆಹಲಿಯಿಂದ ಕಣಕ್ಕಿಳಿಯಲಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್ ಈ ಬಾರಿ ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಮೂಲಕ ಅವರು ಜನರಿಂದ ನೇರವಾಗಿ ಆಯ್ಕೆ ಆಗಲು ಬಯಸಿದ್ದಾರೆ.
ಗಾಂಧಿ ನಗರದಿಂದ ಅಮಿತ್ ಶಾ ಸ್ಪರ್ಧೆ: ಮೊದಲ ಪಟ್ಟಿಯನ್ನು ಪ್ರಕಟಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ಪ್ರಧಾನಿ ಮೋದಿ ವಾರಾಣಸಿಯಿಂದಲೇ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದರು. ನಂಬರ್ ಟೂ ಎಂದೇ ಗೃಹ ಸಚಿವ ಅಮಿತ್ ಶಾ ಗಾಂಧಿನಗರದಿಂದ ಸ್ಪರ್ಧಿಸಲಿದ್ದು, ಮನ್ಸುಖ್ ಮಾಂಡವಿಯಾ ಪೋರಬಂದರ್ ನಿಂದ ಸ್ಪರ್ಧಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಖನೌದಿಂದ ಹಾಗೂ ಸ್ಮೃತಿ ಇರಾನಿ ಮತ್ತೆ ಅಮೇಥಿಯಿಂದಲೇ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ನಾಯಕ ಅಲೋಕ್ ಶರ್ಮಾ ಮಧ್ಯಪ್ರದೇಶದ ಭೋಪಾಲ್‌ನಿಂದ ಸ್ಪರ್ಧಿಸಲಿದ್ದರೆ, ಕೇಂದ್ರ ಸಚಿವ ಕಿರಣ್ ರಿಜಿಜು ಅರುಣಾಚಲ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಸಂಸದ ಬಿಷ್ಣು ಪದಾ ರೇ ಅಂಡಮಾನ್ ಮತ್ತು ನಿಕೋಬಾರ್‌ನಿಂದ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. 2020ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುಣಾದಿಂದ ಸ್ಪರ್ಧಿಸಲಿದ್ದಾರೆ. ಆದರೆ ಈ ಬಾರಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಹೀಗಿದೆ ಸಮುದಾಯದ ಲೆಕ್ಕಾಚಾರ: 195 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಪಟ್ಟಿಯಲ್ಲಿ 47 ಯುವ ಅಭ್ಯರ್ಥಿಗಳು, 28 ಮಹಿಳಾ ಅಭ್ಯರ್ಥಿಗಳು, 27 ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳು, 18 ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳು ಮತ್ತು 57 ಒಬಿಸಿ/ಹಿಂದುಳಿದ ವರ್ಗದ ಅಭ್ಯರ್ಥಿಗಳು ಸೇರಿದ್ದಾರೆ. ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಪಟ್ಟಿಯನ್ನು ಪ್ರಕಟಿಸಿದೆ ಎಂದು ಬಿಜೆಪಿ ನಾಯಕ ವಿನೋದ್ ತಾವ್ಡೆ ದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದಾರೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ (ಸಿಇಸಿ) ಮ್ಯಾರಥಾನ್ ಸಭೆಯ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಉಸ್ತುವಾರಿಗಳು, ಸಹ ಉಸ್ತುವಾರಿಗಳು ಮತ್ತು ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಅಸ್ಸಾಂ, ಉತ್ತರಾಖಂಡ ಮತ್ತು ಗೋವಾ ಮುಖ್ಯಮಂತ್ರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನು ಓದಿ: ಲೋಕಸಭೆ ಚುನಾವಣೆ: 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ವಾರಾಣಸಿಯಲ್ಲೇ ಮೋದಿ ಸ್ಪರ್ಧೆ