ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ತಾವು ಪ್ರತಿಪಕ್ಷದಲ್ಲಿರುವಂತೆ ಮತ್ತು ಕಾಂಗ್ರೆಸ್ ಪ್ರಸ್ತುತ ಅಧಿಕಾರದಲ್ಲಿದೆಯೇನೋ ಎಂಬಂತೆ ಅದರ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಹೀಗೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವ್ಯಂಗ್ಯವಾಡಿದರು.
ಹೂಡಿಕೆಗಳನ್ನು ಆಕರ್ಷಿಸಲು ತಮ್ಮ ವಿದೇಶ ಪ್ರವಾಸ ಪೂರ್ಣಗೊಳಿಸಿ ಸ್ಪೇನ್ನಿಂದ ಇಲ್ಲಿಗೆ ಆಗಮಿಸಿದ ಸ್ಟಾಲಿನ್, ತಮ್ಮ ವಿದೇಶ ಪ್ರವಾಸದ ಸಮಯದಲ್ಲಿ ಹಲವಾರು ಕಂಪನಿಗಳು 3,440 ಕೋಟಿ ರೂ.ಗಳ ಹೂಡಿಕೆಯ ಭರವಸೆ ನೀಡಿವೆ ಮತ್ತು ಇದು ತಮಿಳುನಾಡು ರಾಜ್ಯ ಮತ್ತು ಡಿಎಂಕೆ ಆಡಳಿತದ ಮೇಲೆ ಬಹುರಾಷ್ಟ್ರೀಯ ಕಂಪನಿಗಳು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ತಮಿಳುನಾಡಿನಲ್ಲಿ ಹೂಡಿಕೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಚುನಾವಣೆ ನಂತರವೇ ಹೂಡಿಕೆಯ ಮುಂದಿನ ಮಾತುಕತೆ ನಡೆಸಬಹುದು ಎಂದರು.
ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಭಾಷಣದ ಬಗ್ಗೆ ಕೇಳಿದಾಗ, ನಾನು ಅದನ್ನು ನೋಡಿದೆ, ಓದಿದೆ, ಆನಂದಿಸಿದೆ ಮತ್ತು ನಕ್ಕು ಬಿಟ್ಟೆ ಎಂದರು. ಮೋದಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಬಿಜೆಪಿ ವಿರೋಧ ಪಕ್ಷವಾಗಿರುವಂತೆ ಮತ್ತು ಕಾಂಗ್ರೆಸ್ ಆಡಳಿತದಲ್ಲಿರುವಂತೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿಯವರು ವಿರೋಧ ಪಕ್ಷದ ನಾಯಕನಂತೆ ವರ್ತಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಅರ್ಥವಾಗದ ಒಗಟಾಗಿದೆ ಎಂದು ಅವರು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಖಂಡಿತವಾಗಿಯೂ 370 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಆಡಳಿತಾರೂಢ ಎನ್ಡಿಎ 400 ಸ್ಥಾನಗಳನ್ನು ದಾಟಲಿದೆ ಎಂದು ಫೆಬ್ರವರಿ 5 ರಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದರು.
ಎನ್ಡಿಎ 400 ಸ್ಥಾನಗಳನ್ನು ದಾಟಲಿದೆ ಎಂಬ ಮೋದಿ ಅವರ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್, ಲೋಕಸಭೆಯಲ್ಲಿ ಎನ್ಡಿಎ ಎಲ್ಲಾ 543 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪ್ರಧಾನಿ ಹೇಳಿದರೂ ಆಶ್ಚರ್ಯ ಪಡಬೇಕಿಲ್ಲ ಎಂದರು. ತಮಿಳು ನಟ ವಿಜಯ್ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಅವರು, ಜನರ ಸೇವೆ ಮಾಡಲು ಯಾರೇ ಮುಂದೆ ಬಂದರೂ ನಮಗೆ ಸಂತೋಷ ಎಂದು ಹೇಳಿದರು. ಬಂಡವಾಳ ಹೂಡಿಕೆ ಆಕರ್ಷಣೆಗಾಗಿ ಜನವರಿ 27 ರಂದು ಸ್ಟಾಲಿನ್ ಸ್ಪೇನ್ ಗೆ ತೆರಳಿದ್ದರು.
ಇದನ್ನೂ ಓದಿ: ಎಲ್ಲ ರೀತಿಯ ಮೀಸಲಾತಿಗೆ ನೆಹರು ವಿರುದ್ಧವಾಗಿದ್ದರು: ರಾಜ್ಯಸಭೆಯಲ್ಲಿ ಮೋದಿ