ನವದೆಹಲಿ: ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿಯ ಶ್ರೇಯಾಂಕಗಳಲ್ಲಿ ಕಳೆದ ದಶಕದಲ್ಲಿ ಭಾರತದ ಶಿಕ್ಷಣ ಕ್ಷೇತ್ರದಲ್ಲಿನ ಮಹತ್ತರ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿಯ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅವರು ಭಾರತೀಯ ವಿಶ್ವವಿದ್ಯಾಲಯಗಳ ಶ್ರೇಯಾಂಕದ ಬಗ್ಗೆ ಪೋಸ್ಟ್ ವೊಂದನ್ನು ಮಾಡಿದ್ದಾರೆ.
" ನರೇಂದ್ರ ಮೋದಿ ಅವರ 10 ವರ್ಷಗಳ ನಾಯಕತ್ವದಲ್ಲಿ ನಿರಂತರವಾಗಿ ಭಾರತೀಯ ವಿಶ್ವವಿದ್ಯಾಲಯಗಳ ಶ್ರೇಯಾಂಕ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿಯ ಶ್ರೇಯಾಂಕಗಳಲ್ಲಿ ಅಭಿವೃದ್ಧಿ ಕಂಡು ಬಂದಿದೆ. 2015 ರಲ್ಲಿ 11 ಸಂಸ್ಥೆಗಳಿಗೆ ಹೋಲಿಸಿದರೆ 46 ಸಂಸ್ಥೆಗಳು, 10 ವರ್ಷಗಳಲ್ಲಿ ಭಾರತವು ಶ್ರೇಯಾಂಕದಲ್ಲಿ ತನ್ನ ಪ್ರಾತಿನಿಧ್ಯವನ್ನು ಶೇಕಡಾ 318 ರಷ್ಟು ಹೆಚ್ಚಿಸಿಕೊಂಡಿದೆ. ಇದು ಜಿ 20 ರಾಷ್ಟ್ರಗಳಲ್ಲಿ ಅತ್ಯಧಿಕವಾಗಿದೆ ಎಂದು ವರದಿ ಹೇಳಿದೆ. 2015ರಲ್ಲಿ ಶ್ರೇಯಾಂಕದಲ್ಲಿ ಕೇವಲ 11 ಸಂಸ್ಥೆಗಳಿದ್ದರೆ 2024ರಲ್ಲಿ ಈ ಸಂಖ್ಯೆ 46ಕ್ಕೆ ಏರಿದೆ" ಎಂದಿದ್ದಾರೆ.
ಈ ಪೋಸ್ಟ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಿಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ,
"ಕಳೆದ 10 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಾವು ಗುಣಾತ್ಮಕ ಬದಲಾವಣೆಗಳತ್ತ ಗಮನ ಹರಿಸಿದ್ದೇವೆ. ಈ ಬೆಳವಣಿಗೆ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯದ ಶ್ರೇಯಾಂಕಗಳಲ್ಲಿ ಪ್ರತಿಫಲಿಸಿದೆ. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಸ್ಥೆಗಳಿಗೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ಅಭಿನಂದನೆಗಳು. ಈ ಸಮಯದಲ್ಲಿ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಇನ್ನೂ ಹೆಚ್ಚಿನ ಉತ್ತೇಜನ ನೀಡಲಾಗುವುದು. ಶ್ರೇಯಾಂಕಗಳಲ್ಲಿನ ಸುಧಾರಣೆಯು ಭಾರತದಲ್ಲಿ ಉನ್ನತ ಶಿಕ್ಷಣದ ಸ್ವರೂಪದಲ್ಲಿನ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಉತ್ಕೃಷ್ಟತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಉನ್ನತ ಆದ್ಯತೆಯಾಗಿ ಉತ್ತೇಜಿಸುವ ಶೈಕ್ಷಣಿಕ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಮಾಡಲು ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಇದು ಒತ್ತಿ ಹೇಳುತ್ತದೆ" ಎಂದು ಶ್ಲಾಘಿಸಿದ್ದಾರೆ.