ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು. ಸಮಾನತೆ ಮತ್ತು ಮಾನವ ಘನತೆಗಾಗಿ ನಿರಂತರ ಹೋರಾಟ ನಡೆಸಿದ್ದ ಅಂಬೇಡ್ಕರ್ ಎಲ್ಲರಿಗೂ ಸ್ಪೂರ್ತಿ ಎಂದು ಈ ಸಂದರ್ಭದಲ್ಲಿ ಮೋದಿ ಬಣ್ಣಿಸಿದ್ದಾರೆ.
"ಮಹಾ ಪರಿನಿರ್ವಾಣ ದಿನದಂದು ನಾವು ಸಂವಿಧಾನ ಶಿಲ್ಪಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ತಲೆಬಾಗಬೇಕು. ಅವರ ಕೊಡುಗೆಗಳನ್ನು ಸ್ಮರಿಸಬೇಕು. ಹಾಗೆಯೇ ಅವರ ದೃಷ್ಟಿಕೋನಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬದ್ಧರಾಗಬೇಕು" ಎಂದು ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Paid homage to Dr. Babasaheb Ambedkar in Delhi. Mahaparinirvan Diwas is a day of gratitude for his tireless efforts to eradicate social injustice. pic.twitter.com/9cdMTF51Sn
— Narendra Modi (@narendramodi) December 6, 2024
ಈ ಪೋಸ್ಟ್ನಲ್ಲಿ ಅವರು ಮುಂಬೈನಲ್ಲಿ ಅಂಬೇಡ್ಕರ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನಡೆದ ಚೈತನ್ಯ ಭೂಮಿಗೆ ಭೇಟಿ ನೀಡಿದ ಸಂದರ್ಭದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಂಸತ್ ಭವನದ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ನಮನ: "ಅಂಬೇಡ್ಕರ್ ಅವರು ತಮ್ಮ ಸಂಪೂರ್ಣ ಜೀವನವನ್ನು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಮುಡಿಪಿಟ್ಟವರು. ಅವರ ಚಿಂತನೆ ಮತ್ತು ಸಂವಿಧಾನಕ್ಕೆ ನೀಡಿರುವ ಕೊಡುಗೆಗಳನ್ನು ರಕ್ಷಿಸುವ ಕೆಲಸವಾಗಬೇಕು" ಎಂದು ಖರ್ಗೆ ತಿಳಿಸಿದ್ದಾರೆ.
ಮಹಾ ಪರಿನಿರ್ವಾಣ ಎಂದರೇನು?: ಡಾ.ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ. 1956ರ ಡಿಸೆಂಬರ್ 6ರಂದು ಅವರು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದರು. ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರಿಂದ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಗುರುತಿಸಲಾಗುತ್ತದೆ. ಬೌದ್ಧ ಧರ್ಮದಲ್ಲಿ ಪರಿನಿರ್ವಾಣ ಎಂದರೆ ತೀರಿಹೋದ ನಂತರ ನಿರ್ವಾಣವಾಗುವುದು ಎಂಬರ್ಥವಿದೆ.
ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆಗೆ 'ಮಹಾ' ಡಿಸಿಎಂ ಏಕನಾಥ್ ಶಿಂಧೆ ಮಾಲಾರ್ಪಣೆ