ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಕೇಂದ್ರ ಸರ್ಕಾರದಲ್ಲಿ ರಾಜ್ಯದ ಐವರು ಸಂಸದರಿಗೆ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಾಲ್ವರು ಸಂಸದರು ಹಾಗೂ ಓರ್ವ ರಾಜ್ಯಸಭಾ ಸದಸ್ಯರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು.
ರಾಷ್ಟ್ರಪತಿ ಭವನದಲ್ಲಿ ಸಂಜೆ 7:15ಕ್ಕೆ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಬಳಿಕ ಕರ್ನಾಟಕದಿಂದ ಐವರು ಸೇರಿದಂತೆ 60ಕ್ಕೂ ಹೆಚ್ಚು ಸಂಸದರು ಸಚಿವರಾಗಿ ಪದಗ್ರಹಣ ಮಾಡಿದರು.
ರಾಜ್ಯದಿಂದ ಯಾರಿಗೆ ಸಚಿವ ಸ್ಥಾನ?: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಮತ್ತು ಕರ್ನಾಟಕದಿಂದ ರಾಜ್ಯಸಭೆ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಕುಮಾರಸ್ವಾಮಿಗೆ ಕ್ಯಾಬಿನೆಟ್ ದರ್ಜೆ: ಮೋದಿ 3.0 ಸರ್ಕಾರದಲ್ಲಿ ಎನ್ಡಿಎ ಮೈತ್ರಿ ಪಕ್ಷವಾಗಿರುವ ಜೆಡಿಎಸ್ಗೆ ಒಂದು ಸಚಿವ ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ.
ಬಿಜೆಪಿಯ ನಾಲ್ವರಿಗೆ ಅವಕಾಶ: ಕಳೆದ ಬಾರಿ ಸಚಿವರಾಗಿದ್ದ ಪ್ರಲ್ಹಾದ್ ಜೋಶಿ ಅವರು ಪುನಃ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಬಾರಿ ಇವರು ಸಂಸದೀಯ ಮತ್ತು ಕಲ್ಲಿದ್ದಲು ಗಣಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಇನ್ನು ಕಳೆದ ಬಾರಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೂ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗಿದೆ. ಜೊತೆಗೆ ಶೋಭಾ ಕರಂದ್ಲಾಜೆ ಕೂಡ ಪುನಃ ಮೋದಿ ಸಂಪುಟ ಸೇರಿದ್ದಾರೆ. ಇದೇ ಮೊದಲ ಬಾರಿಗೆ ತುಮಕೂರು ಸಂಸದರಾಗಿ ಆಯ್ಕೆ ಆಗಿರುವ ವಿ. ಸೋಮಣ್ಣ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ - Prime Minister Modi