ಸಸಾರಾಮ್ (ಬಿಹಾರ): ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಪ್ರತಿಪಕ್ಷ ನಾಯಕರ ವಿರುದ್ಧದ 'ಮುಜರಾ' ಹೇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಈ ಹೇಳಿಕೆಯ ಮೂಲಕ "ಬಿಹಾರವನ್ನು ಅವಮಾನಿಸಿದ್ದಾರೆ" ಎಂದು ಆರೋಪಿಸಿದರು.
ಸಸಾರಾಮ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಮತ್ತು ಮಹಾಮೈತ್ರಿಕೂಟದ ಅಭ್ಯರ್ಥಿ ಮನೋಜ್ ಕುಮಾರ್ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಬಿಹಾರದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿಯವರು ವಿರೋಧ ಪಕ್ಷದ ನಾಯಕರಿಗೆ ಮುಜ್ರಾ ಪದವನ್ನು ಬಳಸಿದ್ದರು.
ಈ ಪದ ಬಳಸಿ ಮೋದಿಯವರು ಬಿಹಾರವನ್ನು ಅವಮಾನಿಸಿದ್ದಾರೆ. ಮೋದಿಯವರು ಬಿಹಾರದ ಮಣ್ಣಿನಲ್ಲಿ ಇಂತಹ ಪದಗಳನ್ನು ಬಳಸಿದ್ದಾರೆ. ಇಲ್ಲಿ ಮುಜರಾ ನಡೆಯುತ್ತದೆ ಎಂದು ಮೋದಿ ಹೇಳಿದ್ದಾರೆ. ಇದು ಬಿಹಾರ ಮತ್ತು ರಾಜ್ಯದ ಮತದಾರರಿಗೆ ಮಾಡಿದ ಅವಮಾನ. ಮೋದಿಯವರ ಇಂತಹ ಅಸಭ್ಯ ಹೇಳಿಕೆಗಳನ್ನು ಬಿಹಾರ ಸಹಿಸುವುದಿಲ್ಲ. ಬಿಹಾರದ ಪುಣ್ಯಭೂಮಿಯ ಬಗ್ಗೆ ಈ ರೀತಿ ಹೇಳಿಕೆ ನೀಡುವ ಮೂಲಕ ಇಲ್ಲಿನ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
‘ಪ್ರಧಾನಿ ಮೋದಿಯವರು ತಮ್ಮನ್ನು ‘ತೀಶಮಾರ್ಖನ್’ ಎಂದು ಪರಿಗಣಿಸುತ್ತಾರೆ. ಅವರು ತಪ್ಪು ಅಭಿಪ್ರಾಯದಲ್ಲಿದ್ದಾರೆ. ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ ಜನರು ಮುಕ್ತವಾಗಿ ಮಾತನಾಡುವುದಕ್ಕೆ ಬಿಡುವುದಿಲ್ಲ. ಏನನ್ನೂ ಹೇಳಲು ಅವಕಾಶವಿದೆ, ಈ ಚುನಾವಣೆಯು ಜನರು ವರ್ಸಸ್ ಮೋದಿ, ರಾಹುಲ್ ವರ್ಸಸ್ ಮೋದಿ ಅಲ್ಲ ಎಂದರು.
ಪ್ರಧಾನಿಯಾಗಲಿ ಅಥವಾ ಇತರ ಬಿಜೆಪಿ ನಾಯಕರು ಬೆಳೆಯುತ್ತಿರುವ ನಿರುದ್ಯೋಗ ಅಥವಾ ಬೆಲೆ ಏರಿಕೆಯಂತಹ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಅವರು ಕೋಮು ದ್ವೇಷವನ್ನು ಹರಡುತ್ತಿದ್ದಾರೆ. ಸಂವಿಧಾನದ ಮೇಲೆ ದಾಳಿ ಮಾಡುವ ಮತ್ತು ದ್ವೇಷದ ರಾಜಕಾರಣವನ್ನು ಹರಡುವ ಶಕ್ತಿಗಳನ್ನು ಸೋಲಿಸಬೇಕು. ಧರ್ಮ ಮತ್ತು ಜಾತಿಯ ಆಧಾರದ ಮೇಲೆ ದೇಶ ವಿಭಜಿಸುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ತೆರಿಗೆ ವಿಧಿಸುವುದಾಗಿ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾಗಿದೆ. ನಾವು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಅವರಿಗೆ (ಮೋದಿ) ಸೋನಿಯಾ ಜಿ, ರಾಹುಲ್ ಜಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ನಿಂದಿಸಲು ಮಾತ್ರ ತಿಳಿದಿದೆ. ಅವರು ಶ್ರೀಮಂತರನ್ನು ತಬ್ಬಿಕೊಳ್ಳುತ್ತಾರೆ, ಬಡವರನ್ನಲ್ಲ. ಅವರ ಸರ್ಕಾರವು ಹಿಂದುಳಿದ ವರ್ಗಗಳ ಹಕ್ಕುಗಳು ಮತ್ತು ಕಲ್ಯಾಣ ನಿರ್ಲಕ್ಷಿಸಿದೆ ಎಂದು ಖರ್ಗೆ ದೂರಿದರು.