ನವದೆಹಲಿ: ದೇಶದಲ್ಲಿನ ಪ್ರಚಲಿತ ಘಟನಾವಳಿಗಳ ಬಗ್ಗೆ ಬೆಳಕು ಚೆಲ್ಲುವ ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ಮಾಸಿಕ ಭಾನುಲಿ ಕಾರ್ಯಕ್ರಮ ಮುಂದಿನ ಮೂರು ತಿಂಗಳು ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ವತಃ ಪ್ರಧಾನಿಯವರೇ ತಮ್ಮ ಇಂದಿನ (ಭಾನುವಾರ) 110ನೇ ಸಂಚಿಕೆಯಲ್ಲಿ ತಿಳಿಸಿದರು.
ಭಾನುವಾರ ಪ್ರಸಾರವಾದ 110ನೇ ಸಂಚಿಕೆ ಮತ್ತು ಈ ವರ್ಷದ ಎರಡನೇ ಕಂತಿನಲ್ಲಿ 'ನಮೋ ಡ್ರೋನ್ ದೀದಿ', ಮೊದಲ ಬಾರಿಗೆ ಮತ ಹಾಕುತ್ತಿರುವ ಯುವ ಮತದಾರರು ದಾಖಲೆ ಪ್ರಮಾಣದಲ್ಲಿ ಭಾಗವಹಿಸಲು, ಪ್ರವಾಸೋದ್ಯಮ, ಸಾಮಾಜಿಕ ಕಳಕಳಿ, ಸಾರ್ವಜನಿಕ ಜೀವನದ ಮೇಲೆ ಯುವಕರು ರೀಲ್ಸ್, ವಿಡಿಯೋ ತಯಾರಿಸುತ್ತಿರುವುದನ್ನು ಮೋದಿ ಶ್ಲಾಘಿಸಿದರು.
ನಾರಿ ಶಕ್ತಿಯ ಅಭ್ಯುದಯ: ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಮಾರ್ಚ್ 8 ರಂದು 'ಮಹಿಳಾ ದಿನ' ಆಚರಿಸಲಿದ್ದೇವೆ. ಈ ವಿಶೇಷ ದಿನದಂದು ದೇಶದ ಅಭಿವೃದ್ಧಿಯ ಪಯಣದಲ್ಲಿ ಮಹಿಳಾ ಶಕ್ತಿಯ ಕೊಡುಗೆಗಳನ್ನು ಜೋಡಿಸಲು ಸದಾವಕಾಶ ಬಂದಿದೆ. ಮಹಾಕವಿ ಭಾರತಿಯಾರ್ ಅವರು ಹೇಳುವಂತೆ, ಮಹಿಳೆಯರಿಗೆ ಸಮಾನ ಅವಕಾಶಗಳು ನೀಡಿದಲ್ಲಿ ದೇಶ ಅಥವಾ ಜಗತ್ತು ಅಭಿವೃದ್ಧಿ ಹೊಂದಲು ಸಾಧ್ಯ. ಅದರ ಹಾದಿಯಲ್ಲಿ ಭಾರತ ಮುನ್ನುಗ್ಗುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಆರಂಭಿಸಿದ 'ನಮೋ ಡ್ರೋನ್ ದೀದಿ' ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಗ್ರಾಮೀಣ ಪ್ರದೇಶಗಳ ಮಹಿಳೆಯರ ಜೀವನದಲ್ಲಿ ಮಹತ್ತರ ಬದಲಾವಣೆ ತರುವ ಯೋಜನೆ ಇದಾಗಿದೆ. ಮಹಿಳೆಯರೂ ಡ್ರೋನ್‌ಗಳನ್ನು ಹಾರಿಸುವ ಕನಸನ್ನು ಕೇಂದ್ರ ಸರ್ಕಾರ ಸಾಕಾರ ಮಾಡಿದೆ. ನಮೋ ಡ್ರೋನ್ ದೀದಿ ಯೋಜನೆ ಇಂದು ಎಲ್ಲೆಡೆಯೂ ಚರ್ಚಾ ವಿಷಯವಾಗಿದೆ ಎಂದು ಹೇಳಿದರು.
'ಯುವ ಮತ' ದಾಖಲೆ ಸೃಷ್ಟಿಸಿ: ಮೊದಲ ಬಾರಿಗೆ ಮತಹಾಕುವ ಯುವಕರು ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸಿ. ಲೋಕಸಭೆ ಚುನಾವಣೆಯಲ್ಲಿ ಇದು ಹೊಸ ದಾಖಲೆ ಸೃಷ್ಟಿಸಬೇಕು. ಪ್ರತಿ ಮತದಾರರೂ ತಮ್ಮ ಅಧಿಕಾರವನ್ನು ಚಲಾಯಿಸಿ ಎಂದು ಇದೇ ವೇಳೆ ಕರೆ ನೀಡಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳು ಮನ್ ಕಿ ಬಾತ್ ಪ್ರಸಾರವಾಗುವುದಿಲ್ಲ. ನೀತಿ ಸಂಹಿತೆ ಜಾರಿಯಾಗಲಿದ್ದು, ಕಾನೂನು ಪಾಲನೆ ಅಗತ್ಯವಾಗಿದೆ ಎಂದು ಮೋದಿ ಹೇಳಿದರು.
ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮ 2014ರ ಅಕ್ಟೋಬರ್ 3 ರಂದು ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಇದು 22 ಅಧಿಕೃತ ಭಾಷೆಗಳು ಮತ್ತು 29 ಉಪಭಾಷೆಗಳಲ್ಲಿ ಪ್ರಸಾರವಾಗಲಿದೆ. ಜೊತೆಗೆ ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ದರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲೂ ಕೇಳಿಸಿಕೊಳ್ಳಬಹುದು. ಇದನ್ನು ಆಲ್ ಇಂಡಿಯಾ ರೇಡಿಯೊದ 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳು ಪ್ರಸಾರ ಮಾಡುತ್ತವೆ. 100 ಕೋಟಿಗೂ ಹೆಚ್ಚು ಶ್ರೋತೃಗಳು ಇದನ್ನು ಒಮ್ಮೆಯಾದರೂ ಆಲಿಸಿದ ಬಹುದೊಡ್ಡ ರೇಡಿಯೋ ಕಾರ್ಯಕ್ರಮ ಎಂಬ ದಾಖಲೆ ಇದೆ.
ಇದನ್ನೂ ಓದಿ: ದ್ವಾರಕಾದಲ್ಲಿ ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ 'ಸುದರ್ಶನ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ