ಹೈದರಾಬಾದ್: ಇಲ್ಲಿಂದ 60 ಕಿ.ಮೀ ದೂರದಲ್ಲಿರುವ ಸಂಗಾರೆಡ್ಡಿಯಲ್ಲಿ 7,200 ಕೋಟಿ ರೂ.ಗೂ ಅಧಿಕ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು ಮತ್ತು ಹಲವಾರು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ತೆಲಂಗಾಣದ ಪ್ರಗತಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ರಾಜ್ಯಗಳ ಅಭಿವೃದ್ಧಿಯೇ ದೇಶದ ಬೆಳವಣಿಗೆ ಎಂಬ ಮನೋಭಾವದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
"ಇಂದು 140 ಕೋಟಿ ಭಾರತೀಯರು ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವಾಗಿ ಮಾಡುವ ದೃಢನಿಶ್ಚಯ ಮಾಡಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತವು ಆಧುನಿಕ ಮೂಲಸೌಕರ್ಯಗಳನ್ನು ಹೊಂದಿರುವುದು ಅತ್ಯಗತ್ಯ. ಆದ್ದರಿಂದ, ಕೇಂದ್ರವು ಈ ವರ್ಷದ ಬಜೆಟ್ನಲ್ಲಿ ಮೂಲಸೌಕರ್ಯಕ್ಕಾಗಿ 11 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಿದೆ ಮತ್ತು ತೆಲಂಗಾಣವು ಇದರಿಂದ ಗರಿಷ್ಠ ಪ್ರಯೋಜನ ಪಡೆಯಬೇಕೆಂದು ಕೇಂದ್ರ ಬಯಸಿದೆ. ಕಳೆದ 10 ವರ್ಷಗಳಿಂದ ತೆಲಂಗಾಣವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೇಂದ್ರವು ನಿರಂತರವಾಗಿ ಕೆಲಸ ಮಾಡುತ್ತಿದೆ" ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.
ಸೋಮವಾರ ರಾಜ್ಯದ ಅದಿಲಾಬಾದ್ನಲ್ಲಿ 56,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದನ್ನು ನೆನಪಿಸಿಕೊಂಡ ಅವರು, ಇಂದು ಸಂಗಾರೆಡ್ಡಿ ಪಟ್ಟಣದಲ್ಲಿ ಸುಮಾರು 7,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಈ ಯೋಜನೆಗಳು ರಸ್ತೆ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಂತಹ ಅನೇಕ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿವೆ.
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ &ಡಿ) ಚಟುವಟಿಕೆಗಳನ್ನು ಉತ್ತೇಜಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೈದರಾಬಾದ್ ನ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಿದ ನಾಗರಿಕ ವಿಮಾನಯಾನ ಸಂಶೋಧನಾ ಸಂಸ್ಥೆ (ಸಿಎಆರ್ಒ)ಯ ಕೇಂದ್ರವನ್ನು ಕೂಡ ಪ್ರಧಾನಿ ಇದೇ ಸಮಯದಲ್ಲಿ ಉದ್ಘಾಟಿಸಿದರು.
ಪ್ರಧಾನಿ ಮೋದಿ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ 65ರ 29 ಕಿ.ಮೀ ಉದ್ದದ ಪುಣೆ-ಹೈದರಾಬಾದ್ ವಿಭಾಗದ ಆರು ಪಥದ ರಸ್ತೆಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯು ತೆಲಂಗಾಣದ ಪ್ರಮುಖ ಕೈಗಾರಿಕಾ ಕೇಂದ್ರಗಳಾದ ಪತಂಚೇರು ಬಳಿಯ ಪಶಮೈಲಾರಾಮ್ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಒದಗಿಸುತ್ತದೆ. ಇದಲ್ಲದೆ ಆರು ಹೊಸ ನಿಲ್ದಾಣ ಕಟ್ಟಡಗಳೊಂದಿಗೆ ನಿರ್ಮಾಣವಾದ ಸನತ್ ನಗರ-ಮೌಲಾ ಅಲಿ ರೈಲು ಮಾರ್ಗದ ಡಬ್ಲಿಂಗ್ ಮತ್ತು ವಿದ್ಯುದ್ದೀಕರಣವನ್ನು ಅವರು ಉದ್ಘಾಟಿಸಿದರು.
ಇದನ್ನೂ ಓದಿ : ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ಗೆ ಪ್ರಧಾನಿ ಮೋದಿ ಅಭಿನಂದನೆ