ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬರಲು ಮುಹೂರ್ತ ನಿಗದಿಯಾಗಿದೆ. ರಾಷ್ಟ್ರಪತಿ ಭವನದಲ್ಲಿ ಜೂನ್ 9ರಂದು ಸಂಜೆ 7.15ಕ್ಕೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟದ ಇತರ ಸದಸ್ಯರಿಗೆ ರಾಷ್ಟ್ರಪತಿಗಳು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.
ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಳ ಬಹುಮತ ಪಡೆದಿದೆ. ಬಿಜೆಪಿ 240 ಸ್ಥಾನಗಳನ್ನು ಪಡೆದರೆ, ಒಟ್ಟಾರೆ ಎನ್‌ಡಿಎ ಮಿತ್ರಪಕ್ಷಗಳು 293 ಸ್ಥಾನಗಳನ್ನು ಗೆದ್ದಿವೆ.
ಇಂದು ಬೆಳಗ್ಗೆ ನಡೆದ ಮೈತ್ರಿಕೂಟದ ನಾಯಕರು ಹಾಗೂ ಸಂಸದರ ಸಭೆಯಲ್ಲಿ ಮೋದಿ ಅವರನ್ನು ಎನ್‌ಡಿಎ ಸಂಸದೀಯ ಪಕ್ಷದ ನಾಯಕ, ಬಿಜೆಪಿ ಸಂಸದೀಯ ಪಕ್ಷದ ನಾಯಕ ಮತ್ತು ಲೋಕಸಭೆಯಲ್ಲಿ ಬಿಜೆಪಿ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಇದಾದ ಬಳಿಕ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ವೇಳೆ, ಮೋದಿ ಅವರಿಗೆ ಸರ್ಕಾರ ರಚಿಸಲು ರಾಷ್ಟ್ರಪತಿಗಳು ಆಹ್ವಾನ ನೀಡಿ, ನಿಯೋಜಿತ ಪ್ರಧಾನಿಯಾಗಿ ಕಾರ್ಯನಿರ್ವಹಿಸಲು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಮೋದಿ, ಜೂನ್ 9ರಂದು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ನಾವು ಸಚಿವರ ಪಟ್ಟಿಯನ್ನು ರಾಷ್ಟ್ರಪತಿಗೆ ರವಾನಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದರು.
ಮತ್ತೊಂದೆಡೆ, ಎನ್‌ಡಿಎ ನಿಯೋಗ ಸಹ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿತು. ನರೇಂದ್ರ ಮೋದಿ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾದ ಪತ್ರ ಹಾಗೂ ಮೈತ್ರಿಕೂಟದ ಪಕ್ಷಗಳ ಬೆಂಬಲ ಪತ್ರವನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಿದರು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ಈ ನಿಯೋಗದಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ಅಶ್ವಿನ್ ವೈಷ್ಣವ್, ಡಾ.ಸಿ.ಎನ್.ಮಂಜುನಾಥ್, ಎನ್.ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಏಕನಾಥ್ ಶಿಂಧೆ, ಹೆಚ್.ಡಿ.ಕುಮಾರಸ್ವಾಮಿ, ಚಿರಾಗ್ ಪಾಸ್ವಾನ್, ರಾಮದಾಸ್ ಅಠವಾಲೆ ಸೇರಿದಂತೆ ಹಲವು ನಾಯಕರಿದ್ದರು.
ಇದಕ್ಕೂ ಮುನ್ನ ಮೋದಿ ಬಿಜೆಪಿಯ ವರಿಷ್ಠ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಿವಾಸಕ್ಕೆ ತೆರಳಿ, ಅವರನ್ನು ಭೇಟಿ ಮಾಡಿದ್ದರು. 2014ರಲ್ಲಿ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ನಂತರ 2019ರಲ್ಲೂ ಎರಡನೇ ಬಾರಿ ಪದಗ್ರಹಣ ಮಾಡಿದ್ದರು. ಈಗ ಮೂರನೇ ಬಾರಿಯೂ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾಗಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ