ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ತಯಾರಿ ನಡೆಸುತ್ತಿದ್ದಾರೆ ಎಂಬ ಊಹಾಪೋಗಳ ನಡುವೆ ಇಂದು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಮತ್ತೋರ್ವ ಕುಸ್ತಿಪಟು ಭಜರಂಗ್ ಪುನಿಯಾ ಜೊತೆಗಿದ್ದರು. ಈ ಮೂಲಕ ಫೋಗಟ್ ರಾಜಕೀಯ ಅಖಾಡಕ್ಕಿಳಿಯುವ ಸ್ಪಷ್ಟ ಸೂಚನೆ ನೀಡಿದ್ದಾರೆ.
ಫೋಗಟ್ ಮತ್ತು ಪೂನಿಯಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಹರಿಯಾಣ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಬಾರಿಯಾ, ಇಬ್ಬರೂ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಗುರುವಾರ ಇದಕ್ಕೆಲ್ಲ ಉತ್ತರ ಸಿಗಲಿದೆ ಎಂದು ಹೇಳಿದ್ದರು.
ಇದಕ್ಕೆ ಪೂರಕವೆಂಬಂತೆ ಇಂದು ರಾಹುಲ್ ಗಾಂಧಿ ಜೊತೆಗೆ ವಿನೇಶ್ ಫೋಗಟ್ ಮತ್ತು ಭಜರಂಗ್ ಪೂನಿಯಾ ಅವರ ಫೋಟೋವನ್ನು ಕಾಂಗ್ರೆಸ್ ಅಧಿಕೃತ 'ಎಕ್ಸ್' ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
नेता विपक्ष श्री @RahulGandhi से विनेश फोगाट जी और बजरंग पुनिया जी ने मुलाकात की। pic.twitter.com/UK7HW6kLEL
— Congress (@INCIndia) September 4, 2024
2023ರಲ್ಲಿ ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ನಡೆದ ಪ್ರತಿಭಟನೆಯಲ್ಲಿ ಪೂನಿಯಾ ಮತ್ತು ಫೋಗಟ್ ಸಕ್ರಿಯವಾಗಿ ಭಾಗಿಯಾಗಿದ್ದರು.
ಕುಸ್ತಿಗೆ ವಿದಾಯ ಹೇಳಿದ್ದ ವಿನೇಶ್ ಫೋಗಟ್: ಪ್ಯಾರಿಸ್ ಒಲಿಂಪಿಕ್ಸ್ನ ಅಂತಿಮ ಸುತ್ತಿನಲ್ಲಿ 100 ಗ್ರಾಂ ದೇಹ ತೂಕ ಹೆಚ್ಚಳದಿಂದಾಗಿ ಅವರು ಅನರ್ಹತೆ ಶಿಕ್ಷೆಗೆ ಒಳಗಾಗಿದ್ದರು. ಅನರ್ಹತೆ ಶಿಕ್ಷೆ ಪ್ರಶ್ನಿಸಿ ಜಂಟಿ ಬೆಳ್ಳಿ ಪದಕ ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಬೆನ್ನಲ್ಲೇ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಪ್ಯಾರಿಸ್ನಿಂದ ಭಾರತಕ್ಕೆ ಮರಳಿದ ಬಳಿಕ ಹೆಚ್ಚಾಗಿ ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ: ಹರಿಯಾಣ ವಿಧಾನಸಭೆಯ ಒಟ್ಟು 90 ಸ್ಥಾನಗಳ ಪೈಕಿ 66 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ ಎಂದು ತಿಳಿದುಬಂದಿದೆ. ಆದರೆ, ಅಧಿಕೃತ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಅಕ್ಟೋಬರ್ 5ರಿಂದ ಹರಿಯಾಣ ವಿಧಾನಸಭಾ ಚುನಾವಣೆ ಆರಂಭವಾಗಲಿದೆ. ಮತ ಎಣಿಕೆ ಅಕ್ಟೋಬರ್ 8ರಂದು ನಡೆಯಲಿದೆ.
ಇದನ್ನೂ ಓದಿ: ರಾಜಕೀಯ ಅಖಾಡದಲ್ಲಿ ಕುಸ್ತಿಯಾಡ್ತಾರಾ ವಿನೇಶ್ ಫೋಗಟ್?: ಕಾಂಗ್ರೆಸ್ ಸೇರುವ ಬಗ್ಗೆ ಊಹಾಪೋಹ