ನವದೆಹಲಿ: 2024ರ ಲೋಕಸಭೆ ಚುನಾವಣೆ ಪ್ರಮುಖ ಘಟ್ಟಕ್ಕೆ ತಲುಪಿದೆ. ಇಂದು (ಮೇ 20) ಎಂಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರತಿಷ್ಠಿತ ಕ್ಷೇತ್ರಗಳು ಸೇರಿ 49 ಲೋಕಸಭಾ ಕ್ಷೇತ್ರಗಳಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದೆ. ಇದೇ ವೇಳೆ, ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಪೈಕಿ ಬಿಜೆಡಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದ್ದಾರೆ.
ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಏಳು ಹಂತಗಳಲ್ಲಿ ಮತದಾನ ನಿಗದಿ ಮಾಡಿದೆ. ಈಗಾಗಲೇ ನಾಲ್ಕು ಹಂತಗಳಲ್ಲಿ ಚುನಾವಣೆ ಮುಗಿದಿದೆ. ಇದುವರೆಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 379 ಕ್ಷೇತ್ರಗಳಲ್ಲಿ ವೋಟಿಂಗ್ ಮುಕ್ತಾಯವಾಗಿದೆ. ಈಗ ಐದನೇ ಹಂತದಲ್ಲಿ 49 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಮತದಾನಕ್ಕೆ ಅಗತ್ಯ ಹಾಗೂ ಸಕಲ ಸಿದ್ಧತೆಗಳನ್ನು ಭಾನುವಾರ ಸಂಜೆಯೇ ಚುನಾವಣೆ ಪೂರ್ಣಗೊಳಿಸಿದೆ. ಮತಯಂತ್ರಗಳ ಸಮೇತ ಚುನಾವಣಾ ಸಿಬ್ಬಂದಿ ತಮ್ಮ ಮತಗಟ್ಟೆಗಳಿಗೆ ತೆರಳಿದ್ದಾರೆ. ಸೋಮವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ.
ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳು: 49 ಲೋಕಸಭಾ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಕ್ಷೇತ್ರಗಳಿವೆ. ಮಹಾರಾಷ್ಟ್ರ (13)- ಧುಲೆ, ದಿಂಡೋರಿ, ನಾಸಿಕ್, ಪಾಲ್ಘರ್, ಭಿವಂಡಿ, ಕಲ್ಯಾಣ್, ಥಾಣೆ, ಮುಂಬೈ ಉತ್ತರ, ಮುಂಬೈ ಉತ್ತರ - ಪಶ್ಚಿಮ, ಮುಂಬೈ ಉತ್ತರ-ಪೂರ್ವ, ಮುಂಬೈ ಉತ್ತರ ಕೇಂದ್ರ, ಮುಂಬೈ ದಕ್ಷಿಣ ಕೇಂದ್ರ, ಮುಂಬೈ ದಕ್ಷಿಣ ಕ್ಷೇತ್ರ.
ಉತ್ತರ ಪ್ರದೇಶ (14)- ಮೋಹನ್‌ಲಾಲ್‌ಗಂಜ್, ಲಖನೌ, ರಾಯ್ ಬರೇಲಿ, ಅಮೇಥಿ, ಜಲೌನ್, ಝಾನ್ಸಿ, ಹಮೀರ್‌ಪುರ್, ಬಂದಾ, ಫತೇಪುರ್, ಕೌಶಂಬಿ, ಬಾರಾಬಂಕಿ, ಫೈಜಾಬಾದ್, ಕೈಸರ್‌ಗಂಜ್, ಗೊಂಡಾ ಕ್ಷೇತ್ರ.
ಬಿಹಾರ (5)- ಸೀತಾಮರ್ಹಿ, ಮಧುಬನಿ, ಮುಜಾಫರ್‌ಪುರ, ಸರನ್, ಹಾಜಿಪುರ ಕ್ಷೇತ್ರ.
ಜಾರ್ಖಂಡ್ (3)- ಛತ್ರಾ, ಕೊಡರ್ಮಾ, ಹಜಾರಿಬಾಗ್ ಕ್ಷೇತ್ರ.
ಒಡಿಶಾ (5)- ಬರ್ಗರ್, ಸುಂದರ್‌ಘರ್, ಬೋಲಂಗೀರ್, ಕಂಧಮಾಲ್, ಅಸ್ಕಾ ಕ್ಷೇತ್ರ.
ಪಶ್ಚಿಮ ಬಂಗಾಳ (7) - ಬಂಗಾವ್, ಬರಾಕ್‌ಪುರ, ಹೌರಾ, ಉಲುಬೇರಿಯಾ, ಶ್ರೀರಾಂಪುರ, ಹೂಗ್ಲಿ, ಆರಂಬಾಗ್ ಕ್ಷೇತ್ರ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲಡಾಖ್ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಪ್ರತಿಷ್ಠಿತ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳ ವಿವರ: ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದ ಒಟ್ಟಾರೆ 695 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 83 ಮಹಿಳಾ ಅಭ್ಯರ್ಥಿಗಳು ಚುನಾವಣಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಅಮೇಥಿಯಂತಹ ಹಲವು ಪ್ರತಿಷ್ಠಿತ ಕ್ಷೇತ್ರಗಳಿಗೆ ವೋಟಿಂಗ್ ನಡೆಯಲಿದೆ. ರಾಯ್ ಬರೇಲಿಯಲ್ಲಿ ಈ ಬಾರಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆಯಿಂದ ಈ ಕ್ಷೇತ್ರವು ದೇಶದ ಗಮನ ಸೆಳೆದಿದೆ. ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮರು ಆಯ್ಕೆ ಬಯಸಿದ್ದಾರೆ.
ಉತ್ತರ ಪ್ರದೇಶದ ಲಖನೌ ಕ್ಷೇತ್ರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫತೇಪುರ್ ಕ್ಷೇತ್ರದಲ್ಲಿ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಕಣದಲ್ಲಿದ್ದಾರೆ. ಮುಂಬೈ ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಪಶ್ಚಿಮ ಬಂಗಾಳದ ಬಂಗಾವ್ ಕ್ಷೇತ್ರದಲ್ಲಿ ಮತ್ತೊಬ್ಬ ಕೇಂದ್ರ ಸಚಿವ ಶಾಂತನು ಠಾಕೂರ್ ಸ್ಪರ್ಧಿಸಿದ್ದಾರೆ.
ಬಿಹಾರದ ಹಾಜಿಪುರ ಕ್ಷೇತ್ರದಿಂದ ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್, ಬಿಹಾರದ ಸರನ್ ಕ್ಷೇತ್ರದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಹಾಗೂ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ನಡುವೆ ಹಣಾಹಣಿ ಇದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸ್ಪರ್ಧಿಸಿದ್ದಾರೆ. ಮುಂಬೈನ ಎಲ್ಲ ಆರು ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.
ಇದನ್ನೂ ಓದಿ: ದೆಹಲಿ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ದಾಳಿ: ಇದು ಬಿಜೆಪಿಯ ಸೋಲಿನ ಹತಾಶೆ ತೋರಿಸುತ್ತದೆ ಎಂದ ಕಾಂಗ್ರೆಸ್