ಹೈದರಾಬಾದ್: 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 96 ಸ್ಥಾನಗಳಿಗೆ ಮೇ 13 ರಂದು ಮತದಾನ ನಡೆಯಲಿದ್ದು ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಅಭ್ಯರ್ಥಿಗಳು ನಾಳೆ ಮನೆ - ಮನೆ ಪ್ರಚಾರ ನಡೆಸಿ ಮತಯಾಚಿಸಲಿದ್ದಾರೆ.
ಈ ಹಂತದಲ್ಲಿ ಕೇಂದ್ರಾಡಳಿತ ಪ್ರದೇಶ ಸೇರಿ 10 ರಾಜ್ಯಗಳ ಸುಮಾರು 96 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ 1,717 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆಂಧ್ರಪ್ರದೇಶ (25), ತೆಲಂಗಾಣ (17)ದ ಎಲ್ಲ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಉಳಿದಂತೆ ಉತ್ತರ ಪ್ರದೇಶ (13), ಮಹಾರಾಷ್ಟ್ರ (11), ಪಶ್ಚಿಮ ಬಂಗಾಳ (8) ಮಧ್ಯಪ್ರದೇಶ (8), ಬಿಹಾರ (5), ಜಾರ್ಖಂಡ್ (4) ಒಡಿಶಾ (4) ಜಮ್ಮು ಮತ್ತು ಕಾಶ್ಮೀರ (1) ಸ್ಥಾನಕ್ಕೆ ಮತದಾನ ನಡೆಯಲಿದೆ. ಮೋದಿ ಸರ್ಕಾರದ ಐವರು ಕೇಂದ್ರ ಸಚಿವರು, ಓರ್ವ ಮಾಜಿ ಸಿಎಂ, ಓರ್ವ ನಟ ಮತ್ತು ಇಬ್ಬರು ಕ್ರಿಕೆಟಿಗರು ಸೇರಿದಂತೆ ಒಟ್ಟು 1717 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜೂನ್ 4 ರಂದು ಫಲಿತಾಶ ಹೊರಬೀಳಲಿದೆ. ಸೋಮವಾರ ನಡೆಯಲಿರುವ ಚುನಾವಣಾ ಕಣದಲ್ಲಿ ಹಲವು ಘಟಾನುಘಟಿ ನಾಯರು ಅಖಾಡದಲ್ಲಿದ್ದಾರೆ.
ಪ್ರಮುಖ ಘಟನುಘಟಿಗಳು: ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (ಕನೌಜ್), ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (ಹೈದರಾಬಾದ್), ಮಾಧವಿ ಲತಾ (ಹೈದರಾಬಾದ್), ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ (ಉಜಿಯಾರ್‌ಪುರ), ಅಜಯ್ ಮಿಶ್ರಾ ತೆನಿ (ಲಖಿಂಪುರ ಖೇರಿ), ಶತ್ರುಘ್ನ ಸಿನ್ಹಾ (ಅಸನ್ಸೋಲ್ ), ವೈಎಸ್ ಶರ್ಮಿಳಾ ರೆಡ್ಡಿ (ಕಡಪಾ), ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ (ಬಹರಂಪುರ), ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ (ಬೆಹ್ರಾಂಪುರ), ಟಿಎಂಸಿಯ ನಾಯಕಿ ಮಹುವಾ ಮೊಯಿತ್ರಾ (ಕೃಷ್ಣನಗರ) ಸೇರಿದಂತೆ ಹಲವು ಅನುಭವಿಗಳು ಈ ಹಂತದ ಚುನಾವಣಾ ಕಣದಲ್ಲಿದ್ದಾರೆ.
7 ಹಂತದಲ್ಲಿ ಚುನಾವಣೆ: 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಒಟ್ಟು 7 ಹಂತದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದ್ದು, ಅದರಲ್ಲಿ ಈಗಾಗಲೇ ಮೂರು ಹಂತದ ಚುನಾವಣೆ ಮುಗಿದಿದೆ. ಸೋಮವಾರ ನಡೆಯಲಿರುವ ಚುನಾವಣೆ ಸೇರಿ ಇನ್ನು ನಾಲ್ಕು ಹಂತಲದಲ್ಲಿ ಈ ಚುನಾವಣೆ ನಡೆಯಲಿವೆ.
- ಹಂತ 1: ಏಪ್ರಿಲ್ 19 (66.14% ಅಂತಿಮ ಮತದಾನ)
- ಹಂತ 2: ಏಪ್ರಿಲ್ 26 (66.71% ಅಂತಿಮ ಮತದಾನ)
- ಹಂತ 3: ಮೇ 7 (65.68% ಅಂತಿಮ ಮತದಾನ)
- ಹಂತ 4: ಮೇ 13
- ಹಂತ 5: ಮೇ 20
- ಹಂತ 6: ಮೇ 25
- ಹಂತ 7: ಜೂನ್ 1
- ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.