ಕೋಲ್ಕತಾ(ಪಶ್ಚಿಮ ಬಂಗಾಳ): ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಅಪರಾಧಿಗಳಿಗೆ ಕಂಡಲ್ಲಿ ಗುಂಡು ಹಾರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ(ಟಿಎಂಸಿ) ಸಂಸದ ಹಾಗು ನಟ ದೇಬ್ ಅವರು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಕುಲ್ತಲಿ ಎಂಬಲ್ಲಿ ಇತ್ತೀಚಿಗೆ ನಡೆದ 9 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ದೇಬ್ ಈ ಹೇಳಿಕೆ ನೀಡಿದ್ದಾರೆ.
ತಿಂಗಳ ಹಿಂದೆ ಕೋಲ್ಕತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ತರಬೇತಿನಿರತ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ವಿರುದ್ಧ ಪ್ರತಿಭಟನೆಗಳು ಮುಂದುವರೆಯುತ್ತಿರುವ ನಡುವೆಯೇ ಮತ್ತೊಂದು ಘಟನೆ ನಡೆದಿದೆ.
"ಇಂಥ ಪ್ರಕರಣಗಳಲ್ಲಿ ದುಷ್ಕೃತ್ಯ ಎಸಗಿದವರನ್ನು ಗುರುತಿಸಿ ಅವರು ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ ಸುಮ್ಮನೆ ತೆರಿಗೆದಾರರ ಹಣ ವ್ಯರ್ಥ ಮಾಡಬಾರದು, ಕಂಡಲ್ಲಿ ಗುಂಡಿಕ್ಕಬೇಕು ಎಂದು ಸಂಸದ ದೇಬ್ ಒತ್ತಾಯಿಸಿದ್ದಾರೆ. "ದೇಶದಲ್ಲಿ ಕಾನೂನುಗಳ ಶಕ್ತಿಯುತವಾಗಿವೆ. ಇದರ ಮಧ್ಯೆಯೂ ನಾವು ನಮ್ಮ ತಾಯಂದಿರನ್ನು, ಹೆಣ್ಣು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದರು.
"ಭವಿಷ್ಯದಲ್ಲಿ ಯಾರೂ ಕೂಡಾ ಇಂಥ ದುಷ್ಕೃತ್ಯ ಎಸಗುವ ಕುರಿತು ಯೋಚನೆ ಕೂಡಾ ಮಾಡಬಾರದು, ಅಂಥ ಕಠಿಣ ಶಿಕ್ಷೆಯನ್ನು ಅಪರಾಧಿಗಳಿಗೆ ನೀಡಬೇಕಿದೆ" ಎಂಬುದು ಸಂಸದ ದೇವ್ ಅಭಿಮತ. "ಅಪರಾಧಿಗಳ ಮನಸ್ಸಿನಲ್ಲಿ ಭಯವಿಲ್ಲದೇ ಹೋದರೆ ಅಮಾನವೀಯ ಕೃತ್ಯಗಳನ್ನು ತಡೆಯುವುದು ಸಾಧ್ಯವಿಲ್ಲ" ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಐವರು ಯುವಕರಿಂದ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಆರೋಪ - Two girls raped