ನವದೆಹಲಿ: ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ ಪರ್ಲ್ ಗ್ರೂಪ್ ಆಫ್ ಕಂಪನಿ ಮಾಲೀಕ ನಿರ್ಮಲ್ ಸಿಂಗ್ ಭಂಗು ಭಾನುವಾರ ನಿಧನರಾಗಿದ್ದಾರೆ. ಶನಿವಾರ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ನಿರ್ಮಲ್ ಸಿಂಗ್ ಹಲವು ವರ್ಷಗಳಿಂದ ತಿಹಾರ್ ಜೈಲಿನಲ್ಲಿದ್ದರು.
ನಿರ್ಮಲ್ ಸಿಂಗ್ ಭಂಗು ಆರೋಗ್ಯ ಹಠಾತ್ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಪಶ್ಚಿಮ ಜಿಲ್ಲಾ ಡಿಸಿಪಿ ವಿಚಿತ್ರಾ ವೀರ್, ನಿರ್ಮಲ್ ಸಿಂಗ್ ಭಂಗು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಬಹಳ ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪರ್ಲ್ ಗ್ರೂಪ್ ಕಂಪನಿ ಹೆಸರಿನಲ್ಲಿ ಚಿಟ್ ಫಂಡ್ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಅವರ ಮೇಲಿತ್ತು. ಈ ಪ್ರಕರಣದಲ್ಲಿ 2016 ರಿಂದ ತಿಹಾರ್ ಜೈಲಿನಲ್ಲಿದ್ದರು. ನಿರ್ಮಲ್ ಸಿಂಗ್ ಭಂಗು ಅವರನ್ನು ಜನವರಿ 8, 2016 ರಂದು ಚಿಟ್ ಫಂಡ್ ಕಂಪನಿ ಮಾಡಿದ ಹಗರಣದ ಆರೋಪದ ಮೇಲೆ ಸಿಬಿಐ ಬಂಧಿಸಿತ್ತು.
ಹಾಲು ಮಾರುವವ ಲಕ್ಷಾಧಿಪತಿಯಾಗಿದ್ದು ಹೇಗೆ?: ಮೂಲಗಳ ಪ್ರಕಾರ, ಪರ್ಲ್ ಗ್ರೂಪ್ ಕಂಪನಿ ಮಾಲೀಕ ನಿರ್ಮಲ್ ಸಿಂಗ್ ಭಂಗು ಪಂಜಾಬ್‌ನ ಬರ್ನಾಲಾ ಜಿಲ್ಲೆಯ ನಿವಾಸಿ. ಆರಂಭದಲ್ಲಿ ಈ ಭಾಗದ ವಿವಿಧ ಗ್ರಾಮಗಳಿಗೆ ತೆರಳಿ ಹಾಲು ಮಾರಾಟ ಮಾಡುತ್ತಿದ್ದರು. ಇದಾದ ನಂತರ 70ರ ದಶಕದಲ್ಲಿ ಉದ್ಯೋಗ ಅರಸಿ ಕೋಲ್ಕತ್ತಾಗೆ ತೆರಳಿ ಅಲ್ಲಿ ಆಗಿನ ಪ್ರಸಿದ್ಧ ಕಂಪನಿ ಪೀರ್‌ಲೆಸ್‌ನಲ್ಲಿ ಕೆಲಸ ಮಾಡಿದರು. ಸ್ವಲ್ಪ ಸಮಯದ ನಂತರ, ಅಲ್ಲಿ ಕೆಲಸ ಬಿಟ್ಟು ಹರಿಯಾಣದ ಕಂಪನಿ, ಫಾರೆಸ್ಟ್ ಇಂಡಿಯಾ ಲಿಮಿಟೆಡ್‌ನಲ್ಲಿ ಕೆಲಸ ಮಾಡಲು ಬಂದರು. ಆದರೆ, ಈ ಕಂಪನಿ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದ್ದರಿಂದ ಕೆಲ ಸಮಯದ ಬಳಿಕ ಈ ಕಂಪನಿಯನ್ನೂ ಮುಚ್ಚಲಾಗಿತ್ತು.
ನಂತರ 1980 ರಲ್ಲಿ ಅವರು ಪರ್ಲ್ ಗೋಲ್ಡನ್ ಫಾರೆಸ್ಟ್ ಎಂಬ ಸ್ವಂತ ಕಂಪನಿ ಸ್ಥಾಪನೆ ಮಾಡಿದ್ದರು. ತೇಗ ಮತ್ತು ಇತರ ಮರಗಳಲ್ಲಿ ಹೂಡಿಕೆ ಮಾಡಿದರೆ ಜನರಿಗೆ ಉತ್ತಮ ಲಾಭ ನೀಡುವ ಮೂಲಕ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದರು. ಇವರ ಈ ಭರವಸೆಯನ್ನು ನಂಬಿದ ಜನರು ಇವರ ಕಂಪನಿಯಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಲು ಆರಂಭಿಸಿದರು. ಇವರ ಕಂಪನಿ ಆರಂಭವಾದ ಒಂದೂವರೆ ದಶಕದಲ್ಲಿ ಕೋಟ್ಯಂತರ ರೂ. ಅಕ್ರಮ ಎಸಗಿರುವ ಬಗ್ಗೆ ದೂರುಗಳು ಬಂದವು. ಈ ದೂರುಗಳ ಅನ್ವಯ ಆದಾಯ ತೆರಿಗೆ ಮತ್ತು ಇತರ ಏಜೆನ್ಸಿಗಳು ತನಿಖೆ ಪ್ರಾರಂಭಿಸಿದವು. ಆ ಬಳಿಕ ಕಂಪನಿಯಲ್ಲಿ ಅಕ್ರಮ ಆಗಿರುವುದು ಕಂಡು ಬಂದಿದ್ದರಿಂದ ಕಂಪನಿಯನ್ನು ಮುಚ್ಚಲಾಯಿತು. ದೇಶದ ವಿವಿಧ ಭಾಗಗಳಿಂದ ಕಂಪನಿ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ಪ್ರಗತಿಯಲ್ಲಿದೆ.
ಇದನ್ನು ಓದಿ:ಪರಪ್ಪನ ಅಗ್ರಹಾರ ಸೆರೆಮನೆಯೇ ಅಥವಾ ಅರಮನೆಯೇ?: ಎನ್.ರವಿಕುಮಾರ್ ಪ್ರಶ್ನೆ - Parappan Agrahara