ನವದೆಹಲಿ: ಹೆದ್ದಾರಿಗಳಲ್ಲಿನ ಸುಗಮ ಸಂಚಾರಕ್ಕೆ ಮಾರ್ಚ್ 15ರೊಳಗೆ ಪೇಟಿಎಂ ಫಾಸ್ಟ್ಟ್ಯಾಗ್ ಬಳಕೆದಾರರು ಬೇರೆ ಬ್ಯಾಂಕ್ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲಹೆ ನೀಡಿದೆ.
ಮಾರ್ಚ್ 15ರ ಬಳಿಕ ಪೇಟಿಎಂ ಫಾಸ್ಟಾಗ್ಗಳಲ್ಲಿ ಬ್ಯಾಲೆನ್ಸ್ ಇದ್ದರೂ ನಿಷ್ಕ್ರಿಯಗೊಳ್ಳಲಿದೆ. ಇದರ ಕಾರ್ಯಾಚರಣೆ ಸಂಪೂರ್ಣ ಬಂದ್ ಆಗಲಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಿಸುವಾಗ ದುಪ್ಪಟು ದಂಡವನ್ನು ತಪ್ಪಿಸಲು ಬೇರೆ ಬ್ಯಾಂಕ್ ಆಯ್ಕೆಗೆ ಮುಂದಾಗುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ಬಂಧ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಫಾಸ್ಟಾಗ್ ಬಳಕೆದಾರರು ಮಾರ್ಚ್ 15ರ ಬಳಿಕ ರಿಚಾರ್ಜ್ ಅಥವಾ ಟಾಪ್ ಅಪ್ ಬ್ಯಾಲೆನ್ಸ್ ಮಾಡಲು ಸಾಧ್ಯವಿಲ್ಲ. ಪೇಟಿಎಂ ಬದಲಾಗಿ ಬೇರೆ ಬ್ಯಾಂಕ್ ಆಯ್ಕೆ ಮಾಡುವಂತೆ ತಿಳಿಸಿದೆ. ಈ ಸಂಬಂಧದ ಯಾವುದೇ ಸಲಹೆ ಮತ್ತು ಮಾಹಿತಿಗೆ ಪೇಟಿಎಂ ಫಾಸ್ಟ್ಟ್ಯಾಗ್ ಗ್ರಾಹಕರು ತಮ್ಮ ಬ್ಯಾಂಕ್ ಅಥವಾ ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ಲಿಮಿಟೆಡ್ (ಐಎಚ್ಎಂಸಿಎಲ್) ವೆಬ್ಸೈಟ್ಗೆ ಭೇಟಿ ನೀಡುವಂತೆ ಸೂಚನೆ ನೀಡಿದೆ.
ಎಲ್ಲ ಪೇಟಿಎಂ ಫಾಸ್ಟ್ಟ್ಯಾಗ್ ಬಳಕೆದಾರರು ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ಸುಗಮ ಸಂಚಾರದ ಅನುಭವಕ್ಕೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸುವಂತೆ ಎನ್ಎಚ್ಎಐ ಒತ್ತಾಯಿಸಿದೆ. ಕಳೆದ ತಿಂಗಳು ಸೆಂಟ್ರಲ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ನ ಯುಪಿಐ ಬಳಕೆ ಮಾಡುತ್ತಿರುವ ಬಳಕೆದಾರರಿಗೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡುವಂತೆ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್ಪಿಸಿಐ)ಗೆ ಕೋರಿತ್ತು. ಈ ಮೂಲಕ ಸುಲಭವಾಗಿ ಬಳಕೆದಾರರು ಪೇಟಿಎಂನಿಂದ ಹೊರ ಬರುವ ಅವಕಾಶ ಒದಗಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಿಂದ ನೀಡಲಾಗಿರುವ ಫಾಸ್ಟ್ಟ್ಯಾಗ್ ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ಗಳು (ಎನ್ಸಿಎಂಸಿ)ಗಳು ಮಾರ್ಚ್ 15ರಿಂದ ಬಳಕೆಗೆ ಅಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಇದರ ಅನಾನುಕೂಲದಿಂದ ತಪ್ಪಿಸಿಕೊಳ್ಳಲು ಮಾರ್ಚ್ 15ರೊಳಗೆ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಆರ್ಬಿಐ ತಿಳಿಸಿದೆ.
ಫಾಸ್ಟ್ಟ್ಯಾಗ್ ಮಾತ್ರವಲ್ಲದೇ, ಪೇಟಿಎಂ ಪೇಮೆಂಟ್ಸ್ನ ಬ್ಯಾಂಕ್ನ ಮುಂದಿನ ಠೇವಣಿ, ಹಣ ವರ್ಗಾವಣೆ, ಟಾಪ್-ಅಪ್, ಪ್ರೀ ಪೇಯ್ಡ್ ಇನ್ಸ್ಟ್ರುಮೆಂಟ್ಸ್, ವಾಲೆಟ್ ಮೇಲೆ ಕೂಡ ಈ ಪರಿಣಾಮ ಬೀರುವ ಹಿನ್ನೆಲೆ ಈ ಬಗ್ಗೆ ಗ್ರಾಹಕರು ಮುನ್ನೆಚ್ಚರಿಕೆ ವಹಿಸಬೇಕಿದೆ.
ಇದನ್ನೂ ಓದಿ: 395ಕ್ಕೆ ತಲುಪಿದ ಪೇಟಿಎಂ ಷೇರು ಬೆಲೆ: ಭಾರಿ ಕುಸಿತದ ಬಳಿಕ ಸತತ ನಾಲ್ಕನೇ ದಿನವೂ ಏರಿಕೆ