ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಎನ್ಸಿಪಿಯ ಎರಡು ಬಣಗಳು 'ನಾರಿ ಶಕ್ತಿ'ಯನ್ನು ಅವಲಂಬಿಸಿರುವ ಬಾರಾಮತಿಯಲ್ಲಿ ಕುತೂಹಲಕಾರಿಕದನ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎನ್ಸಿಪಿಯ ಸುನೇತ್ರಾ ಪವಾರ್ ಮತ್ತು ಎನ್ಸಿಪಿ (ಎಸ್ಪಿ) ಯ ಸುಪ್ರಿಯಾ ಸುಳೆ ಇಬ್ಬರೂ ಒಂದು ಕಾಲದಲ್ಲಿ ಪವಾರ್ ಕುಟುಂಬದ ಸದಸ್ಯರಾಗಿ ಒಂದಾಗಿದ್ದವರು. ಆದರೆ ಬದಲಾದ ಕಾಲದಲ್ಲಿ ರಾಜಕೀಯ ಕಾರಣದಿಂದ ಇಬ್ಬರೂ ಪರಸ್ಪರರ ವಿರುದ್ಧ ಸೆಣಸಾಡುತ್ತಿದ್ದಾರೆ.
ಹಾಲಿ ಸಂಸದೆ ಮತ್ತು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ತಮ್ಮ ತಂದೆಯ ನಾಯಕತ್ವದಲ್ಲಿ ಎನ್ಸಿಪಿ (ಶರದ್ ಚಂದ್ರ ಪವಾರ್) ಟಿಕೆಟ್ನಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ, ತಮ್ಮ ಶಕ್ತಿ ಮತ್ತು ರಾಜಕೀಯ ಮೌಲ್ಯವನ್ನು ಸಾಬೀತುಪಡಿಸಲು ನಿರ್ಧರಿಸಿರುವ ಅಜಿತ್ ಪವಾರ್ ಅವರು ತಮ್ಮ ಪತ್ನಿ ಸುನೇತ್ರಾ ಪವಾರ್ ಅವರನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಬಾರಾಮತಿ ಕ್ಷೇತ್ರದಲ್ಲಿ ದಶಕಗಳ ಕಾಲದಿಂದ ಪ್ರಾಬಲ್ಯ ಸಾಧಿಸಿರುವುದು ವಿಶೇಷ. ಆದರೆ ಅವರು ಈ ಬಾರಿ ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ಸದ್ಯ ಈ ಕ್ಷೇತ್ರದಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿರುವುದು ಕಾಣಿಸುತ್ತಿದೆ.
ಎನ್ಸಿಪಿ ಮುಖ್ಯಸ್ಥ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ತಮ್ಮ ಅತ್ತಿಗೆ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧೆಗೆ ಅಣಿಯಾಗಿದ್ದಾರೆ. ಸುನೇತ್ರಾ ಪವಾರ್ ಅವರು ಮತದಾರರನ್ನು ಉದ್ದೇಶಿಸಿ ಎರಡು ಪುಟಗಳ ಪತ್ರವೊಂದನ್ನು ಬರೆದಿದ್ದಾರೆ. ಒಂದೇ ಕುಟುಂಬದ ಇಬ್ಬರು ಮಹಿಳೆಯರ ಪರಸ್ಪರರ ವಿರುದ್ಧ ಸ್ಪರ್ಧಿಸುತ್ತಿರುವ 2024ರ ಲೋಕಸಭಾ ಚುನಾವಣೆಯು ನನ್ನ ಪಾಲಿಗೆ ಬಹುದೊಡ್ಡ ಸವಾಲಾಗಿದೆ ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದ ರಾಜಕೀಯವು ದಶಕಗಳಿಂದ ಸ್ಥಳೀಯವಾಗಿ ಪ್ರಬಲ ಕುಟುಂಬಗಳ ಭದ್ರಕೋಟೆಯಾಗಿ ರೂಪಾಂತರಗೊಂಡ ಹಲವಾರು ಕ್ಷೇತ್ರಗಳಿಂದ ಕೂಡಿದ್ದರೂ, ಪವಾರ್ ಕುಟುಂಬದ ರಾಜಕೀಯ ಭದ್ರಕೋಟೆಯಾಗಿರುವ ಬಾರಾಮತಿ ಕ್ಷೇತ್ರವು ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
ಕಳೆದ ಹಲವಾರು ದಶಕಗಳಿಂದ, ಪವಾರ್ ಕುಟುಂಬ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ನೇತೃತ್ವದಲ್ಲಿ ಶರದ್ ಬಾರಾಮತಿ ಲೋಕಸಭಾ ಕ್ಷೇತ್ರ ಮತ್ತು ಸಂಬಂಧಿತ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಜುಲೈ 2023 ರಲ್ಲಿ ಕುಟುಂಬದ ಮುಖ್ಯಸ್ಥರ ಸೋದರಳಿಯ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ವಿಭಜನೆ ಆದ ನಂತರ ಬಾರಾಮತಿ ಲೋಕಸಭಾ ಕ್ಷೇತ್ರವು ಈ ಬಾರಿ ಹಿಂದೆಂದೂ ಕಾಣದಂಥ ಸ್ಪರ್ಧೆಯನ್ನು ಕಾಣುತ್ತಿದೆ.
ದೊಡ್ಡ ಮಟ್ಟದ ಪ್ರಚಾರ ಬಯಸದ ಸುನೇತ್ರಾ ಪವಾರ್ ಸರಳತೆಗೆ ಹೆಸರುವಾಸಿಯಾಗಿದ್ದಾರೆ. ಸ್ಥಳೀಯ ಜನ ಇವರನ್ನು ವಹಿನಿ (ಹಿರಿಯ ಸಹೋದರಿ) ಎಂದು ಅಕ್ಕರೆಯಿಂದ ಕರೆಯುತ್ತಾರೆ. ಮರಾಠವಾಡಾದ ಧಾರಾಶಿವದ ರಾಜಕೀಯ ಪ್ರಭಾವಶಾಲಿ ಪಾಟೀಲ್ ಕುಟುಂಬದಿಂದ ಬಂದ ಸುನೇತ್ರಾ, ಪವಾರ್ ಕುಟುಂಬ ನಡೆಸುವ ಹಲವಾರು ಸಂಸ್ಥೆಗಳ ಮಂಡಳಿಯ ಸದಸ್ಯರಾಗಿದ್ದಾರೆ.
ಸುಪ್ರಿಯಾ ತನ್ನ ತಂದೆ ಮತ್ತು ಈ ಪ್ರದೇಶದ ಪವಾರ್ ಕುಟುಂಬದ ಪರಂಪರೆಯಿಂದ ಬಂದವರಾಗಿದ್ದಾರೆ. ಮತ್ತೊಂದೆಡೆ, ಸುನೇತ್ರಾ ತನ್ನ ಪತಿ ಅಜಿತ್ ಪವಾರ್ ಹಾಕಿದ ಅಡಿಪಾಯದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಶರದ್ ಪವಾರ್ ಅವರನ್ನು ಬಾರಾಮತಿಯ ಪ್ರತಿನಿಧಿ ಎಂದು ಕರೆಯಲಾಗುತ್ತದೆ. ಆದರೆ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಸಂಕಷ್ಟದಲ್ಲಿ ನಿಲ್ಲುವ ವ್ಯಕ್ತಿಯಾಗಿದ್ದರು.
"ಕುಟುಂಬದ ಹಿರಿಯ ಮಹಿಳೆಯಾಗಿ ನಾನು ಈ ಬಾರಿ ಹೀಗೆ ಚುನಾವಣೆಗೆ ಸ್ಪರ್ಧಿಸುವುದು ನನಗೆ ಅಷ್ಟೊಂದು ಸರಿ ಕಾಣುವುದಿಲ್ಲ. ಆದರೆ ಕರ್ತವ್ಯ ನಿಭಾಯಿಸಲು ಮತ್ತು ಎಲ್ಲರ ಹಿತಾಸಕ್ತಿಯನ್ನು ಪರಿಗಣಿಸಿದರೆ ನಾನು ಸ್ಪರ್ಧೆ ಮಾಡಬೇಕಿದೆ. ಹೀಗಾಗಿ ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಜಕೀಯಕ್ಕೆ ಪ್ರವೇಶಿಸುವುದು ಮತ್ತು ಅದೂ ನನ್ನ ಕುಟುಂಬ ಸದಸ್ಯರ ವಿರುದ್ಧ ಸ್ಪರ್ಧಿಸುವುದು ಆರಂಭದಲ್ಲಿ ನನಗೆ ತೀರಾ ಕಷ್ಟಕರವಾಗಿತ್ತು. ನನ್ನ ಪತಿ ಹೊಸ ರಾಜಕೀಯ ನಿಲುವನ್ನು ತೆಗೆದುಕೊಂಡಿದ್ದಾರೆ, ಅದು ಅವರದು ಮಾತ್ರವಲ್ಲ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿರುವ ಎಲ್ಲಾ ಹಿರಿಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಸಹ ಈ ನಿಲುವು ತೆಗೆದುಕೊಂಡಿದ್ದಾರೆ" ಎಂದು ಅವರು ಹೇಳಿದರು.
ಇದನ್ನೂ ಓದಿ : ದಾಖಲೆಯ 20.339 ಕೋಟಿ ಆದಾಯ ಗಳಿಸಿದ ದಕ್ಷಿಣ ಕೇಂದ್ರ ರೈಲ್ವೆ - South Central Railway Revenue