ಪಾಟ್ನಾ(ಬಿಹಾರ): ಬಿಹಾರ ರಾಜಧಾನಿ ಪಾಟ್ನಾ ಭಾರತದಲ್ಲಿ ಎರಡನೇ ಅತ್ಯಂತ ಕಲುಷಿತ ನಗರವಾಗಿದೆ. ನಿನ್ನೆ ಇಲ್ಲಿ 316 ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದಾಖಲಾಗಿದೆ. ಈ ಗುಣಮಟ್ಟವನ್ನು 'ಅತ್ಯಂತ ಕಳಪೆ' ಎಂದು ವರ್ಗೀಕರಿಸಲಾಗಿದೆ.
ಗ್ರೇಟರ್ ನೋಯ್ಡಾ ಅತ್ಯಂತ ಕಲುಷಿತ ನಗರ: ಸಿವಾನ್ (282), ಮುಜಾಫರ್‌ಪುರ (233), ಹಾಜಿಪುರ (232) ಮತ್ತು ಬೆಟ್ಟಿಯಾ (221) ಇವು ಕಳಪೆ ಎಕ್ಯೂಐ ದಾಖಲಿಸಿದ ಬಿಹಾರದ ಇತರ ನಗರಗಳು. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾಹಿತಿ ಪ್ರಕಾರ, ಉತ್ತರ ಪ್ರದೇಶದಲ್ಲಿರುವ ಗ್ರೇಟರ್ ನೋಯ್ಡಾ ಎಕ್ಯುಐ 346 ರೊಂದಿಗೆ ದೇಶದ ಅತ್ಯಂತ ಕಲುಷಿತ ನಗರವಾಗಿದೆ.
'ತುಂಬಾ ಕಳಪೆ' ಗಾಳಿಯ ಗುಣಮಟ್ಟವು ದೀರ್ಘಕಾಲದ ಉಸಿರಾಟದ ಕಾಯಿಲೆಗೆ ಕಾರಣವಾಗುತ್ತದೆ. ಎಕ್ಯೂಐ ಎಂಬುದು ಗಾಳಿಯ ಗುಣಮಟ್ಟದ ಮೌಲ್ಯಮಾಪನವಾಗಿದ್ದು, ಪಿಎಂ 2.5 ಸೇರಿದಂತೆ ಮಾಲಿನ್ಯಕಾರಕಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. 2.5 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಕಣಗಳು ಮತ್ತು 10 µm ಗಿಂತ ಕಡಿಮೆ ವ್ಯಾಸದ ಕಣಗಳನ್ನು ಇದು ಒಳಗೊಂಡಿರುತ್ತದೆ.
ಬಿಹಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಬಿಎಸ್‌ಪಿಸಿಬಿ) ಅಧ್ಯಕ್ಷ ದೇವೇಂದ್ರ ಕುಮಾರ್ ಶುಕ್ಲಾ ಪ್ರತಿಕ್ರಿಯಿಸಿ, ''ರಾಜ್ಯದ ಕೆಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವುದು ನಿಜ. ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಅನುಸರಿಸದೇ ಇರುವುದು ಮತ್ತು ಇತ್ತೀಚಿನ ಬೆಂಕಿ ಅನಾಹುತ ಘಟನೆಗಳು ಪಾಟ್ನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವಾಗಿವೆ. ಪಾಟ್ನಾದಲ್ಲಿ ಹದಗೆಡುತ್ತಿರುವ ಎಕ್ಯೂಐ ಅನ್ನು ಪರಿಶೀಲಿಸಲು ನಾಗರಿಕ ಸಂಸ್ಥೆಗಳು ರಸ್ತೆಗಳಿಗೆ ನೀರು ಸಿಂಪಡಿಸಲು ಪ್ರಾರಂಭಿಸಬೇಕು" ಎಂದು ತಿಳಿಸಿದರು.
"ಮಳೆ ಖಂಡಿತವಾಗಿಯೂ ತಕ್ಷಣದ ಪರಿಹಾರ ನೀಡುತ್ತದೆ. ರಾಜ್ಯದ ಕೆಲವು ನಗರಗಳಲ್ಲಿ ಹದಗೆಡುತ್ತಿರುವ ಎಕ್ಯೂಐ ಮಟ್ಟ ತಗ್ಗಿಸಲು ಬಿಎಸ್‌ಪಿಸಿಬಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: 140 ಕೋಟಿ ಜನರ ಮನಸ್ಸಿನಲ್ಲಿ ನಂಬಿಕೆ, ವಿಶ್ವಾಸ ಮರುಸ್ಥಾಪಿಸಿರುವುದು ನಮ್ಮ ಸಾಧನೆ: ಪ್ರಧಾನಿ ಮೋದಿ - PM Modi Interview