ಪಾಟ್ನಾ(ಬಿಹಾರ): ಭಿಕ್ಷೆ ಹಣದಿಂದಲೇ ಪಾಟ್ನಾದ ವ್ಯಕ್ತಿಯೊಬ್ಬ ಕೋಟ್ಯಧಿಪತಿಯಾಗಿದ್ದು, ನಗರದ ಅನೇಕ ಕಡೆ ನಿವೇಶನ, ಅನೇಕ ಬ್ಯಾಂಕ್ ಖಾತೆಗಳನ್ನು ಈತ ಹೊಂದಿದ್ದಾನೆ. ಅಷ್ಟೇ ಅಲ್ಲದೇ, ಈತನ ಇಬ್ಬರು ಮಕ್ಕಳು ಖ್ಯಾತ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಮನೆ ಸೌಕರ್ಯವನ್ನು ಹೊಂದಿದ್ದರೂ ಭಿಕ್ಷಾಟನೆಯನ್ನು ಮುಂದುವರೆಸಿರುವ ಭಿಕ್ಷುಕ ಪಪ್ಪು ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಆತ ಹೇಗೆ ಇಷ್ಟು ಶ್ರೀಮಂತ ಭಿಕ್ಷುಕನಾದ ಎಂಬ ಬಗ್ಗೆ ತಿಳಿಸಿದ್ದಾರೆ.
ಒಂದೇ ದಿನಲ್ಲಿ 3000 ಹಣದಿಂದ ಪ್ರೇರಣೆ: ಬಾಲ್ಯದಿಂದಲೂ ಓದಿನಲ್ಲಿ ನನಗೆ ಆಸಕ್ತಿ ಇರಲಿಲ್ಲ. ನನ್ನ ಕುಟುಂಬದ ಸದಸ್ಯರು ಸರಿಯಾಗಿ ಓದುವಂತೆ ಹೊಡೆಯುತ್ತಿದ್ದರು. ಇದರಿಂದ ಕೋಪಗೊಂಡು ನಾನು ಮುಂಬೈಗೆ ಹೋದೆ. ಅಲ್ಲಿಯೇ ಬಹಳ ಸಮಯ ಇದ್ದೆ. ಒಮ್ಮೆ ನಾನು ಟ್ರೈನ್ನಲ್ಲಿ ಹೋಗುವಾಗ ನನ್ನ ಕೈ ಮುರಿದು ಹೋಯಿತು. ಆಸ್ಪತ್ರೆಗೆ ದಾಖಲಾದೆ. ಚಿಕಿತ್ಸೆಗೆ ನನ್ನ ಎಲ್ಲಾ ಹಣವನ್ನು ವ್ಯಯಿಸಿದೆ. ಆಗ ನಾನು ಪಾಟ್ನಾಗೆ ಮರಳಲು ರೈಲ್ವೆ ಸ್ಟೇಷನ್ಗೆ ಬಂದಾಗ, ರೈಲ್ವೆ ನಿಲ್ದಾಣದ ಬಳಿ ನಿಂತ ನನ್ನನ್ನು ನೋಡಿದ ಜನರು ಭಿಕ್ಷುಕ ಎಂದು ಭಾವಿಸಿ ಹಣ ನೀಡಲು ಮುಂದಾದರು. ಎರಡು ಗಂಟೆಗಳ ಕಾಲ ಏನು ಆಯಿತು ಎಂದು ನನಗೆ ತಿಳಿಯಲಿಲ್ಲ. ಅಷ್ಟೊತ್ತಿಗೆ 3,400 ರೂ. ಹಣ ಸಂಗ್ರಹ ಆಯಿತು. ಮರುದಿನ ಮತ್ತೆ ಅದೇ ಸ್ಥಳಕ್ಕೆ ಹೋಗಿ, ಕುಳಿತುಕೊಂಡೆ. ಮತ್ತೆ ಹಣ ಸಂಗ್ರಹವಾಯಿತು. ಇದಾದ ಬಳಿಕ ನಾನು ಪಾಟ್ನಾಗೆ ಮರಳಿದೆ. ಬಳಿಕ ಪಾಟ್ನಾದಲ್ಲಿ ಹನುಮಾನ್ ದೇಗುಲ ಮತ್ತು ರೈಲ್ವೆ ನಿಲ್ದಾಣ ಪ್ರದೇಶದಲ್ಲಿ ಭಿಕ್ಷಾಟನೆ ಆರಂಭಿಸಿದೆ.
ಹಲವು ಆಸ್ತಿ: ಪಪ್ಪು ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆಯನ್ನು ಹೊಂದಿದ್ದಾನೆ. ಅಲ್ಲದೇ, ಈತನ ಹೆಂಡತಿ ಕೂಡ ಐಸಿಐಸಿಐ ಮತ್ತು ಕೊ ಆಪರೇಟಿವ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಾರೆ. ಹಣದ ಹೊರತಾಗಿ ನಗರದ ಅನೇಕ ಕಡೆ ಇವರು ಭೂಮಿ ಮತ್ತು ಮನೆಯನ್ನು ಹೊಂದಿದ್ದಾರೆ. ಈ ಎಲ್ಲಾ ಆಸ್ತಿಯನ್ನು ಅವರು ಭಿಕ್ಷೆ ಬೇಡಿದ ಹಣದಿಂದಲೇ ಸಂಪಾದಿಸಿದ್ದಾರೆ.
ನನ್ನ ಇಬ್ಬರು ಮಕ್ಕಳು ಪಾಟ್ನಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ನಾನು ಓದಿಲ್ಲ. ಹೀಗಾಗಿ ಅವರು ಉನ್ನತ ಸ್ಥಾನವನ್ನು ಪಡೆಯಬೇಕು ಎಂಬ ಉದ್ದೇಶದಿಂದ ಅವರಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದೇನೆ. ನಾನು ಭಿಕ್ಷೆ ಬೇಡಿದ ಹಣದಿಂದ ಅವರನ್ನು ಅಧಿಕಾರಿಗಳನ್ನಾಗಿ ಮಾಡುತ್ತೇನೆ. ಈಗ ದಿನಕ್ಕೆ 400 ರೂ. ಹಣವನ್ನು ಭಿಕ್ಷೆಯಿಂದ ಸಂಪಾದಿಸುತ್ತಿದ್ದೇನೆ. ಅಲ್ಲದೇ ಪ್ರತಿ ತಿಂಗಳು ಬ್ಯಾಂಕ್ನಲ್ಲಿ ಹಣವನ್ನು ಠೇವಣಿ ಇಡುತ್ತಿದ್ದೇನೆ ಎಂದು ಪಪ್ಪು ತಿಳಿಸಿದ್ದಾರೆ.
ಇನ್ನು ಪಪ್ಪು ಕುರಿತು ಮಾತನಾಡಿರುವ ಆತನ ಗೆಳೆಯ ವಿಶಾಲ್, ಪಾಟ್ನಾದಲ್ಲಿ ಪಪ್ಪು ಕೋಟ್ಯಧಿಪತಿ ಭಿಕ್ಷುಕ ಆಗಿದ್ದಾನೆ. ನಾವು ಕೂಡ ಭಿಕ್ಷೆ ಬೇಡಿ ಕೋಟ್ಯಧಿಪತಿಗಳಾಗಿದ್ದೆವು. ಆದರೆ, ಎಲ್ಲಾ ಹಣವನ್ನು ವ್ಯರ್ಥ ಮಾಡಿದೆವು. ನಮಗೆ ಪಪ್ಪು ಬಗ್ಗೆ ಭಾರೀ ಗೌರವ ಇದೆ. ಆತ ಹಣವನ್ನು ಸದುಪಯೋಗ ಪಡಿಸಿಕೊಂಡ, ಇದೇ ಕಾರಣಕ್ಕೆ ನಾವು ಆತನನ್ನು ಕೋಟ್ಯಧಿಪತಿ ಪಪ್ಪು ಎಂದು ಕರೆಯುತ್ತೇವೆ. ಭಿಕ್ಷಾಟನೆ ನಿರ್ಮೂನೆಗೆ ಸರ್ಕಾರ ಎಲ್ಲಾ ಪ್ರಯತ್ನ ನಡೆಸಿದರೂ ಪಪ್ಪು ಮಾತ್ರ ಇದೇ ಭಿಕ್ಷಾಟನೆಯಿಂದ ಕೋಟ್ಯಧಿಪತಿಯಾಗಿದ್ದಾರೆ.
ಇದನ್ನೂ ಓದಿ: ಎಲಾನ್ ಮಸ್ಕ್ ಪ್ರಯೋಗಾಲಯದಲ್ಲಿ ಮತ್ತೊಂದು ವಿಕ್ರಮ: ಮಾನವನ ಮೆದುಳಿನಲ್ಲಿ 'ಟೆಲಿಪತಿ' ಚಿಪ್ ಅಳವಡಿಕೆ