ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬುಧವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಪರಿಣಾಮ ದೆಹಲಿ ನಿವಾಸಿಗಳು ಗುರುವಾರ ಬೆಳಗ್ಗೆ ಸಂಚಾರ ದಟ್ಟಣೆ ಸಮಸ್ಯೆ ಅನುಭವಿಸಿದರು. ಹವಾಮಾನ ಇಲಾಖೆ ಪ್ರಕಾರ, ಋತುವಿನ ಸರಾಸರಿಗಿಂತ ಮೂರು ಪಟ್ಟು ಕಡಿಮೆ, 23 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಇಂದು ಬೆಳಗ್ಗೆ 8.30ರ ವೇಳೆಗೆ ತೇವಾಂಶದ ಪ್ರಮಾಣ ಶೇ.100ರಷ್ಟಿತ್ತು.
ರಾಷ್ಟ್ರ ರಾಜಧಾನಿಗೆ ಪ್ರಾತಿನಿಧಿಕ ಡೇಟಾ ಒದಗಿಸುವ ಸಫ್ದರ್‌ಜಂಗ್ ವೀಕ್ಷಣಾಲಯವು ಕಳೆದ 24 ಗಂಟೆಗಳಲ್ಲಿ ಗುರುವಾರ ಬೆಳಗ್ಗೆ 8.30 ರವರೆಗೆ 77.1 ಮಿಮೀ ಮಳೆಯನ್ನು ದಾಖಲಿಸಿದೆ. ಲೋಧಿ ರಸ್ತೆಯ ವೀಕ್ಷಣಾಲಯ 92.2 ಮಿಮೀ, ರಿಡ್ಜ್ 18.2 ಮಿಮೀ, ಪಾಲಂ 54.5 ಮಿಮೀ ಮತ್ತು ಅಯಾನಗರದಲ್ಲಿ 62.4 ಮಿಮೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಐಎಂಡಿ ತಿಳಿಸಿದೆ.
ಜಿಟಿಕೆ ಡಿಪೋ ಬಳಿ ಜಲಾವೃತಗೊಂಡಿರುವುದರಿಂದ ಜಿಟಿಕೆ ರಸ್ತೆಯ ಎರಡೂ ಮಾರ್ಗಗಳಲ್ಲಿ, ಮುಕರ್ಬಾ ಚೌಕ್‌ನಿಂದ ಆಜಾದ್‌ಪುರ ಚೌಕ್ ಕಡೆಗೆ ಸಂಚಾರಕ್ಕೆ ತೊಂದರೆಯಾಗಿದೆ. ಎಂಬಿ ರಸ್ತೆಯಲ್ಲಿ ನೀರು ನಿಂತಿರುವ ಕಾರಣ ಖಾನ್ಪುರದಿಂದ ಶೂಟಿಂಗ್ ರೇಂಜ್ ಟಿ- ಪಾಯಿಂಟ್ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೆಯೇ ರೋಹ್ಟಕ್ ರಸ್ತೆಯ ನಂಗ್ಲೋಯ್‌ನಿಂದ ಟಿಕ್ರಿ ಬಾರ್ಡರ್ ಕ್ಯಾರೇಜ್‌ವೇಯಲ್ಲಿ ಜಲಾವೃತದಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಪ್ರಯಾಣವನ್ನು ಪ್ಲ್ಯಾನ್ ಮಾಡಿಕೊಳ್ಳಿ" ಎಂದು ದೆಹಲಿ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಲಹೆಯನ್ನು ನೀಡಿದ್ದಾರೆ.
"GGR/PDR ಅಂಡರ್‌ಪಾಸ್ ಮತ್ತು ಧೌಲಾ ಕುವಾನ್ ಫ್ಲೈಓವರ್ ಅಡಿ ರಿಂಗ್ ರಸ್ತೆಯ ಬಳಿ ಜಲಾವೃತವಾಗಿರುವ ಕಾರಣ, ರಿಂಗ್ ರಸ್ತೆ, ವಂದೇ ಮಾತರಂ ಮಾರ್ಗ ಮತ್ತು NH 48 ನಲ್ಲಿ ಟ್ರಾಫಿಕ್ ಹೆಚ್ಚಾಗಿದೆ" ದಯವಿಟ್ಟು ಅದಕ್ಕೆ ಅನುಗುಣವಾಗಿ ನಿಮ್ಮ ಪ್ರಯಾಣವನ್ನು ಯೋಜಿಸಿ" ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ನವದೆಹಲಿಯ ಪ್ರಾದೇಶಿಕ ಹವಾಮಾನ ಕೇಂದ್ರವು ಗುರುವಾರ ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಹಾಗೂ ರಾಜಧಾನಿಯ ಇತರ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬುಧವಾರ, ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ನಿರಂತರ ಮಳೆಯಾಗಿದೆ. ಮಂಗಳವಾರ, ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ಲಘುವಾಗಿ ಸಾಧಾರಣ ಮಳೆ ಸುರಿದಿದೆ. ದಿನವಿಡೀ ಮೋಡ ಕವಿದ ವಾತಾವರಣವಿತ್ತು.
ಇದನ್ನೂ ಓದಿ: ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ: ಉಗಾರ-ಕುಡಚಿ ಸೇತುವೆ ಜಲಾವೃತ - Kudachi bridge sink