ಶ್ರೀನಗರ: ಸಿಂಧೂ ಜಲ ಒಪ್ಪಂದದ ಅಡಿ ನಿರ್ಮಾಣಗೊಳ್ಳುತ್ತಿರುವ ಎರಡು ಜಲವಿದ್ಯುತ್ ಯೋಜನೆಗಳನ್ನು ಪರಿಶೀಲಿಸಲು ಪಾಕಿಸ್ತಾನದ ತಟಸ್ಥ ತಜ್ಞರ ನಿಯೋಗ ಭಾನುವಾರ ಸಂಜೆ ಜಮ್ಮುವಿಗೆ ಭೇಟಿ ನೀಡಿದೆ. ಈ ಭೇಟಿಯು ಉಭಯ ದೇಶಗಳ ನಡುವಿನ ನೀರು ಹಂಚಿಕೆ ವಿವಾದಗಳನ್ನು ಪರಿಹರಿಸುವ ಗುರಿ ಹೊಂದಿದೆ. ಮುಂದಿನ ದಿನಗಳಲ್ಲಿ ಈ ನಿಯೋಗವು ಚೆನಾಬ್ ಕಣಿವೆಯಲ್ಲಿ ಕಿಶನ್ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1960ರ ಒಪ್ಪಂದದ ವಿವಾದ ಇತ್ಯರ್ಥ ಕಾರ್ಯವಿಧಾನದ ಅಡಿ ಐದು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಪಾಕಿಸ್ತಾನಿ ನಿಯೋಗ ಒಂದರ ಮೊದಲ ಭೇಟಿ ಇದಾಗಿದೆ. ಭಾರತ ಮತ್ತು ಪಾಕಿಸ್ತಾನವು ಒಂಬತ್ತು ವರ್ಷಗಳ ಮಾತುಕತೆಗಳ ನಂತರ ಸಿಂಧೂ ಜಲ ಒಪ್ಪಂದಕ್ಕೆ (ಟಿಡಬ್ಲ್ಯೂ)ಸಹಿ ಹಾಕಿದವು. ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನಗೊಂಡವು.
ಇದಕ್ಕೂ ಮೊದಲು ಜನವರಿ 2019 ರಲ್ಲಿ ಮೂರು ಸದಸ್ಯರ ಪಾಕಿಸ್ತಾನಿ ನಿಯೋಗವು ಟಿಡಬ್ಲ್ಯೂಟಿಯ ನಿಬಂಧನೆಗಳ ಅಡಿ ಪಾಕಲ್ ದುಲ್ ಮತ್ತು ಲೋವರ್ ಕಲ್ನಾಯ್ ಜಲವಿದ್ಯುತ್ ಯೋಜನೆಗಳಿಗೆ ಭೇಟಿ ನೀಡಿ ಕೊನೆಯದಾಗಿ ಪರಿಶೀಲಿಸಿತ್ತು. ಮುಂದಿನ ದಿನಗಳಲ್ಲಿ ಈ ನಿಯೋಗವು ಕೇಂದ್ರಾಡಳಿತ ಪ್ರದೇಶದಲ್ಲಿನ ಚೆನಾಬ್ ಕಣಿವೆಯಲ್ಲಿನ ಕಿಶನ್ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆಗಳನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2016ರಲ್ಲಿಯೇ ಜಲವಿದ್ಯುತ್ ಯೋಜನೆಯ ವಿನ್ಯಾಸಕ್ಕೆ ಸಂಬಂಧಿಸಿದಂತೆ ವಿಶ್ವಬ್ಯಾಂಕ್‌ಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ತಟಸ್ಥ ತಜ್ಞರ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದ್ದರು. ಬಳಿಕ ಪಾಕಿಸ್ತಾನ ತನ್ನ ಮನವಿಯನ್ನು ಹಿಂಪಡೆದು ನ್ಯಾಯಾಲಯದ ಮಧ್ಯಸ್ಥಿಕೆಗೆ ಮೊರೆ ಹೋಗಿತ್ತು. ಆದರೆ, ತಟಸ್ಥ ತಜ್ಞರ ಆಯ್ಕೆ ಉತ್ತಮ ಎಂದು ಭಾರತ ಹೇಳಿತ್ತು. ಇದರ ನಂತರ, ಅಕ್ಟೋಬರ್ 2022 ರಲ್ಲಿ, ವಿಶ್ವಬ್ಯಾಂಕ್ ತಟಸ್ಥ ತಜ್ಞರ ಸಮಿತಿಯನ್ನು ರಚಿಸಿತು.