ತೇಣಿ (ತಮಿಳುನಾಡು): ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಅರಣ್ಯವು ಸಾಕಷ್ಟು ವನ್ಯಜೀವಿಗಳ ವಾಸಸ್ಥಾನವಾಗಿದೆ. ಇಲ್ಲಿ ಸಂಚರಿಸುವಾಗ ಪ್ರವಾಸಿಗರು ರಸ್ತೆ ಬದಿಯಲ್ಲೇ ವನ್ಯಜೀವಿಗಳ ವೀಕ್ಷಿಸುತ್ತಾರೆ. ಅಷ್ಟೊಂದು ಸಮೀಪಕಕ್ಕೆ ಅನೇಕ ಪ್ರಾಣಿಗಳು ಬಂದಿರುತ್ತವೆ. ಇದೇ ವೇಳೆ, ಪ್ರವಾಸಿಗರು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿ ಕಾಣಬಹುದು. ಆದರೆ, ಇದರ ನಡುವೆ ಪಡಯಪ್ಪ ಕಾಡಾನೆ ಪ್ಲಾಸ್ಟಿಕ್ ರಾಶಿಯಲ್ಲಿ ಬಿದ್ದಿದ್ದ ತರಕಾರಿ ತ್ಯಾಜ್ಯವನ್ನು ಹೆಕ್ಕಿ, ಹೆಕ್ಕಿ ಸೇವಿಸುತ್ತಿರುವ ಆಘಾತಕಾರಿ ವಿಡಿಯೋ ಬೆಳಕಿಗೆ ಬಂದಿದೆ.
ಮುನ್ನಾರ್ ಅರಣ್ಯ ಪ್ರದೇಶದಲ್ಲಿ ಪಡಯಪ್ಪ ಕಾಡಾನೆ ಆಗಾಗ್ಗೆ ಸಾರ್ವಜನಿಕ ಸ್ಥಳಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತದೆ. ಆಹಾರಕ್ಕಾಗಿ ವಸತಿ ಪ್ರದೇಶಗಳಿಗೆ ಪ್ರವೇಶಿಸಿ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಗಳಿಗೆ ಹಾನಿ ಮಾಡುತ್ತದೆ. ಈ ಪರಿಸ್ಥಿತಿಯಲ್ಲಿ ಆಹಾರ ಅರಸಿ ಕಾಡಾನೆಯು ಮುನ್ನಾರ್ ಸಮೀಪದ ಕಲ್ಲರ್ ಪ್ರದೇಶದಲ್ಲಿ ಕಸ ಮತ್ತು ತರಕಾರಿ ತ್ಯಾಜ್ಯ ವಿಂಗಡಣೆ ಮಾಡುವ ಸ್ಥಳಕ್ಕೆ ಲಗ್ಗೆ ಇಟ್ಟಿದೆ. ಈ ವೇಳೆ, ಪ್ಲಾಸ್ಟಿಕ್ ಕವರ್ಗಳಲ್ಲಿ ಸುತ್ತಿ ಎಸೆದ ತರಕಾರಿ ತ್ಯಾಜ್ಯವನ್ನು ಸೇವಿಸಿದೆ. ಇದೀಗ ಇದರ ವಿಡಿಯೋ ದೃಶ್ಯಾವಳಿ ವೈರಲ್ ಆಗಿವೆ.
ಇಷ್ಟೇ ಅಲ್ಲ, ಕಸ ವಿಂಗಡಣೆಗೆ ಸಂಗ್ರಹಿಸಿದ ತ್ಯಾಜ್ಯದಿಂದ ತರಕಾರಿ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಕಾಡಾನೆ ತಿನ್ನುತ್ತಿರುವ ದೃಶ್ಯವನ್ನು ಅರಣ್ಯ ಕಾರ್ಯಕರ್ತರು ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಸೇವನೆಯಿಂದ ಆನೆಯ ಆರೋಗ್ಯಕ್ಕೆ ಅಪಾಯ ಉಂಟುವಾಗುವ ಸಾಧ್ಯತೆ ಇದೆ. ಆದ್ದರಿಂದ ಅರಣ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಈ ಪ್ರದೇಶದಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಿದೆ. ನಿತ್ಯವೂ ಆನೆಗಳ ಭಯದಿಂದಲೇ ಕೆಲಸಕ್ಕೆ ಹೋಗುವಂತಾಗಿದೆ ಎಂದು ತೋಟದ ಕಾರ್ಮಿಕರು ಹೇಳುತ್ತಾರೆ. ಆದ್ದರಿಂದ ಆನೆಗಳನ್ನು ಕಾಡಿಗೆ ಓಡಿಸಲು ಅರಣಾಧಿಕಾರಿಗಳು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Watch.. ತಮಿಳುನಾಡಿನಲ್ಲಿ ಹಠಾತ್ ಉಕ್ಕಿ ಹರಿದ ಜಲಪಾತ; ಒಬ್ಬ ಯುವಕ ಸಾವು, ಪ್ರವಾಸಿಗರಿಗೆ ನಿರ್ಬಂಧ