ಗ್ವಾಲಿಯರ್(ಮಧ್ಯಪ್ರದೇಶ): ''ಅಧಿಕಾರ, ಸಂಪತ್ತು ಮತ್ತು ಭೂಮಿಯ ದುರಾಸೆ ಇರುವವರು ಮಾತ್ರ ಕಾಂಗ್ರೆಸ್ ತೊರೆದಿದ್ದಾರೆ'' ಎಂದು ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಭಾನುವಾರ ಹೇಳಿದರು.
ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅವರ ಮಾಜಿ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಹೆಸರನ್ನು ಘೋಷಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಿಂಗ್, ''ಅಧಿಕಾರ, ಸಂಪತ್ತು ಮತ್ತು ಭೂಮಿಯ ದುರಾಸೆ ಇರುವವರು ಮಾತ್ರ ಪಕ್ಷ ತೊರೆಯುತ್ತಿದ್ದಾರೆ. ಸಿದ್ಧಾಂತದ ರಾಜಕೀಯದಲ್ಲಿ ನಂಬಿಕೆಯಿಲ್ಲದೇ, ಅಧಿಕಾರಕ್ಕಾಗಿ ರಾಜಕೀಯ ಮಾಡುವವರು ಮಾತ್ರ ಈ ರೀತಿ ಮಾಡುತ್ತಾರೆ" ಎಂದರು.
2020ರ ಮಾರ್ಚ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಸಿಂಧಿಯಾ ಈ ಬಾರಿ ಗುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸಿಂಧಿಯಾ ಗುಣಾದಿಂದ ಸ್ಪರ್ಧಿಸಿ ಸೋತಿದ್ದರು. ಅವರನ್ನು ಬಿಜೆಪಿಯ ಕೆ.ಪಿ.ಸಿಂಗ್ ಯಾದವ್ ಮಣಿಸಿದ್ದರು.
ಜೈರಾಮ್ ರಮೇಶ್ ವಾಗ್ದಾಳಿ: "ಅಸ್ಸಾಂ ಸಿಎಂ ಆಗಿರಲಿ ಅಥವಾ ಜ್ಯೋತಿರಾದಿತ್ಯ ಸಿಂಧಿಯಾ ಆಗಿರಲಿ, ಎಲ್ಲರೂ ವಾಷಿಂಗ್ ಮಷಿನ್‌ಗಳ ಫಲಾನುಭವಿಗಳೇ ಆಗಿದ್ದಾರೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನದ ಉಸ್ತುವಾರಿ ಜೈರಾಮ್ ರಮೇಶ್ ಅವರು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಪ್ರಕರಣಗಳನ್ನು ಹೊಂದಿರುವ ನಾಯಕರು ಬಿಜೆಪಿ ಸೇರಿದ ನಂತರ ಶುದ್ಧವಾಗುತ್ತಾರಾ ಎಂದು ಅವರು ಪ್ರಶ್ನಿಸಿದ್ದಾರೆ. ವಾಷಿಂಗ್ ಮಷಿನ್ ಅಗತ್ಯವಿರುವವರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ತೊರೆದು ಆಡಳಿತಾರೂಢ ಬಿಜೆಪಿ ಸೇರ್ಪಡೆಯಾದ ನಾಯಕರನ್ನು ವಾಷಿಂಗ್ ಮಷಿನ್‌ನ ಫಲಾನುಭವಿಗಳು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ''ಪ್ರತಿಯೊಬ್ಬರಿಗೂ ವಿಭಿನ್ನ ಗಾತ್ರದ ವಾಷಿಂಗ್ ಮಷಿನ್ ಬೇಕಾಗುತ್ತವೆ. ಕೆಲವರಿಗೆ ಸಣ್ಣ, ಇನ್ನು ಕೆಲವರಿಗೆ ಮಧ್ಯಮ ಗಾತ್ರದ ಮಷಿನ್‌ನ ಅಗತ್ಯವಿರುತ್ತದೆ. ಆದರೆ, ಇನ್ನುಳಿದವರಿಗೆ ದೊಡ್ಡ ಗಾತ್ರದ ವಾಷಿಂಗ್ ಮಷಿನ್‌ನ ಅಗತ್ಯವಿದೆ" ಎಂದು ಟೀಕಿಸಿದರು.
ಇದನ್ನೂ ಓದಿ: ತ್ರಿಪುರಾ: ತ್ರಿಪಕ್ಷೀಯ ಒಪ್ಪಂದದ ನಂತರ ಪ್ರತಿಭಟನೆ ಕೈಬಿಟ್ಟ ತಿಪ್ರಾ ಮೋತಾ ಪಕ್ಷ