ಉದಯಪುರ (ಸುರ್ಗುಜಾ): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿನ ವ್ಯವಸ್ಥೆಯಿಂದ ಕೆಲವರು ಮಾತ್ರ ಲಾಭ ಪಡೆಯುತ್ತಿದ್ದು, ಉಳಿದವರೆಲ್ಲರೂ ತೆರಿಗೆ ಪಾವತಿಸುತ್ತಾ ಹಸಿವಿನಿಂದ ಸಾಯುತ್ತಿದ್ದಾರೆ ಎಂದರು.
ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯ ಉದಯಪುರ ಪ್ರದೇಶದ ರಾಮ್ ಗಢ್ ಚೌಕ್ನಲ್ಲಿ ಇಂದು ತಮ್ಮ 'ಭಾರತ ಜೋಡೋ ನ್ಯಾಯ್ ಯಾತ್ರೆ' ಅಂಗವಾಗಿ ಆಯೋಜಿಸಲಾದ ಸಭೆ ಉದ್ದೇಶಿಸಿ ಅವರು ಮಾತನಾಡಿದರು. "ಯಾರಾದರೂ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಅವರು ಇಡಿ, ಸಿಬಿಐ ಮತ್ತು ಐಟಿ ಇಲಾಖೆಯಿಂದ ಕ್ರಮ ಎದುರಿಸಬೇಕಾಗುತ್ತದೆ" ಎಂದು ಅವರು ಹೇಳಿದರು.
"ದ್ವೇಷ ಮತ್ತು ಹಿಂಸಾಚಾರದ ಮೂಲಕ ದೇಶದ ಜನರ ಮೇಲೆ ದಿನದ 24 ಗಂಟೆಯೂ ಅನ್ಯಾಯ ಎಸಗಲಾಗುತ್ತಿದೆ. ಅನ್ಯಾಯ ಎಷ್ಟರ ಮಟ್ಟಿಗೆ ಮೀರಿದೆ ಎಂದರೆ ಬಹುಶಃ ಜನರಿಗೆ ಅದರ ಬಗ್ಗೆ ಮಾತನಾಡಲು ಕೂಡ ಸಾಧ್ಯವಾಗುತ್ತಿಲ್ಲ. ಇದೊಂದು ಸಂಪ್ರದಾಯವಾಗಿ ಬಿಟ್ಟಿದೆ" ಎಂದು ರಾಹುಲ್ ನುಡಿದರು.
"ದೇಶದ ನಿಧಿಯಿಂದ ನೀವು ಪ್ರತಿದಿನ ಎಷ್ಟು ಹಣ ಪಡೆಯುತ್ತಿರುವಿರಿ ಎಂಬ ಬಗ್ಗೆ ದಿನಕ್ಕೆ ಮೂರು ಬಾರಿ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಕು. ನಿಮ್ಮ ದಿನವಿಡೀ ಕೆಲಸ ಮತ್ತು ಪ್ರಯತ್ನಗಳ ನಂತರ ನಿಮಗೆ ಸಿಗುತ್ತಿರುವ ಪ್ರತಿಫಲ ಎಷ್ಟು ಎಂಬ ಬಗ್ಗೆ ಪ್ರಶ್ನಿಸಿಕೊಳ್ಳಿ. ಈ ವ್ಯವಸ್ಥೆಯು ನಿಮ್ಮ ಕೈಬಿಟ್ಟಿದೆ ಹಾಗೂ ಇಂಥ ವ್ಯವಸ್ಥೆಯನ್ನು ಪ್ರಧಾನಿ ಮುನ್ನಡೆಸುತ್ತಿದ್ದಾರೆ ಎಂಬುದು ನಿಮಗೆ 10 ದಿನಗಳಲ್ಲಿ ಅರಿವಾಗುತ್ತದೆ" ಎಂದು ಅವರು ಹೇಳಿದರು.
"ಆ ವ್ಯವಸ್ಥೆಯಲ್ಲಿ ದೇಶದ ಜನಸಂಖ್ಯೆಯ ಶೇ 73ರಷ್ಟಿರುವ ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರು ಮತ್ತು ಸಾಮಾನ್ಯ ವರ್ಗದ ಬಡವರು ಯಾರೂ ಇಲ್ಲ. ಆ ವ್ಯವಸ್ಥೆಯಲ್ಲಿ 100 ರಿಂದ 200... 1000 ರಿಂದ 2000 ಜನ ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು ಉಳಿದ ಜನ ಜಿಎಸ್ಟಿ ಪಾವತಿಸುತ್ತ ಹಸಿವಿನಿಂದ ಸಾಯುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದರು. ಅದಕ್ಕಾಗಿಯೇ ಭಾರತ್ ಜೋಡೋ ಯಾತ್ರೆಗೆ 'ನ್ಯಾಯ್' (ನ್ಯಾಯ) ಎಂಬ ಪದವನ್ನು ಸೇರಿಸಲಾಗಿದೆ ಎಂದು ತಿಳಿಸಿದರು.
ಜನಸಮೂಹದಲ್ಲಿದ್ದ ವ್ಯಕ್ತಿಯೊಬ್ಬನನ್ನು ಕರೆದು ಕಾರಿಗೆ ಹತ್ತಿಸಿಕೊಂಡ ರಾಹುಲ್, ಜನತೆ ಈ ವ್ಯವಸ್ಥೆಯಿಂದ ಹೇಗೆ ಸಂಕಷ್ಟಕ್ಕೀಡಾಗಿದ್ದಾರೆ ಎಂಬುದನ್ನು ವಿವರಿಸುವ ಪ್ರಯತ್ನ ಮಾಡಿದರು. ಇದಕ್ಕಾಗಿ ಒಂದು ಉದಾಹರಣೆಯ ಸಮೇತ ರಾಹುಲ್ ವಿವರಣೆ ನೀಡಿದರು.
ಈ ವ್ಯಕ್ತಿ ಮಾರ್ಕೆಟ್ಗೆ ಹೋಗುತ್ತಾನೆ ಎಂದಿಟ್ಟುಕೊಳ್ಳೋಣ ಮತ್ತು 2 ರಿಂದ 3 ಜನ ಈತನ ಪರ್ಸ ಕದಿಯಲು ಯತ್ನಿಸುತ್ತಾರೆ ಅಂದುಕೊಳ್ಳೋಣ. ಆಗ ಆ ಕಳ್ಳರು ಮೊದಲಿಗೆ ಮಾಡುವುದೇನು ಎಂದು ರಾಹುಲ್ ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ಅವರು, ಮೊದಲ ಕಳ್ಳ ಈ ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆಯುತ್ತಾನೆ. ಇದೇ ರೀತಿ ನಿಮ್ಮನ್ನೂ ಸಹ ಮೋಸ ಮಾಡಲಾಗುತ್ತಿದೆ. ನಂತರ ಎರಡನೇ ಕಳ್ಳ ಬಂದು ಈತನ ಪರ್ಸ್ ಅನ್ನು ಕದಿಯುತ್ತಾನೆ. ಜಿಎಸ್ಟಿ ಮತ್ತು ಡಿಮಾನೆಟೈಸೇಶನ್ ಇದೇ ರೀತಿಯ ಕೃತ್ಯಗಳಾಗಿವೆ. ಕೊನೆಯದಾಗಿ ನೀವು ಇದರ ವಿರುದ್ಧ ಪ್ರತಿಭಟಿಸಿದರೆ ಮೂರನೇ ಕಳ್ಳ ನಿಮಗೆ ಎರಡೇಟು ಹಾಕುತ್ತಾನೆ. ನೀವೊಬ್ಬ ಸಣ್ಣ ಅಂಗಡಿಕಾರನಾಗಿದ್ದು, ವಿರೋಧ ವ್ಯಕ್ತಪಡಿಸಿದರೆ ಸಿಬಿಐ, ಐಟಿ ಮತ್ತು ಇಡಿ ಇಲಾಖೆಗಳು ನಿಮ್ಮ ಬೆನ್ನತ್ತಿ ಬರುತ್ತವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೇಂದ್ರದ ಸೌರ ಮೇಲ್ಛಾವಣಿ ಯೋಜನೆಗೆ ಹೊಸ ಹೆಸರು: ಅನುಕೂಲಗಳೇನು? ಹೀಗೆ ಅರ್ಜಿ ಹಾಕಿ