ಬಿಹಾರ : ಅಪ್ರಾಪ್ತನೊಬ್ಬ ಮತ್ತೊಬ್ಬ ಅಪ್ರಾಪ್ತನನ್ನು ಗುಂಡಿಕ್ಕಿ ಕೊಂದಿರುವ ಘಟನೆಯೊಂದು ಚೆರಿಯಾ ಬರಿಯಾರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಸಾಹಿ ಪಂಚಾಯತ್‌ನ ಔರೈಯಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹತ್ಯೆಯ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪಬ್ಜಿ ಆಡುವಾಗ ಗುಂಡು ಹಾರಿದೆ ಎಂದು ಹೇಳಲಾಗುತ್ತಿದೆ. ಪಿಸ್ತೂಲ್‌ನಿಂದ ಏಕಾಏಕಿ ಹಾರಿದ ಗುಂಡಿಗೆ 12 ವರ್ಷದ ಆರನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಘಟನೆಯ ನಂತರ ಆರೋಪಿ ಪರಾರಿಯಾಗಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಮೃತರನ್ನು ಶ್ರವಣ್ ಯಾದವ್ ಅವರ ಮಗ ಅರ್ಜುನ್ ಕುಮಾರ್ (12) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಶಿವನಾರಾಯಣ ಯಾದವ್ ಅವರ ಮಗ ರಾಜಕುಮಾರ ಯಾದವ್ (14) ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಗ್ರಾಮಸ್ಥ ರಂಜಿತ್ ಯಾದವ್ ಮಾತನಾಡಿ, ಮೃತನು ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಮೃತನ ತಂದೆ ಪಂಜಾಬ್‌ನಲ್ಲಿ ಎಲ್ಲೋ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ಆರೋಪಿ ಮೃತನನ್ನು ಸಮೀಪದ ಮನೆಗೆ ಕರೆದೊಯ್ದು ಅಲ್ಲಿ ಗುಂಡು ಹಾರಿಸಿದ್ದಾನೆ. ನಂತರ ಆರೋಪಿ ರಾಜಕುಮಾರನ ತಾಯಿ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗ ಏನು ಆಟ ಆಡುತ್ತಿದ್ದ ಎಂಬುದು ಅವರಿಗೆ ತಿಳಿದಿರಲಿಲ್ಲ. ಮಕ್ಕಳಿಬ್ಬರ ನಡುವೆ ಏನೆಲ್ಲಾ ದ್ವೇಷವಿತ್ತೋ ಗೊತ್ತಿಲ್ಲ ಎಂದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಚೆರಿಯಬರಿಯಾರ್ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಬೇಗುಸರೈಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳದಿಂದ ಪಿಸ್ತೂಲ್ ಮತ್ತು ಬುಲೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಗುಂಡುಹಾರಿಸಿದ ಆರೋಪಿ ಪರಾರಿಯಾಗಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ವಿವೇಕ್ ಭಾರ್ತಿ ಮಾತನಾಡಿ, ಈ ಘಟನೆಯಲ್ಲಿ ಒಬ್ಬ ಅಪ್ರಾಪ್ತ ಇನ್ನೊಬ್ಬ ಅಪ್ರಾಪ್ತನನ್ನು ಗುಂಡಿಕ್ಕಿ ಕೊಂದಿದ್ದಾನೆ. ಪಬ್ಜಿ ಆಡುವಾಗ ತನ್ನ ಪಕ್ಕದಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿತು ಎಂದು ಅವನು ಹೇಳಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಜಾರ್ಖಂಡ್: ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ