ಹೈದರಾಬಾದ್: ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತು ವಿವಿಧ ರಾಜಕೀಯ ನಾಯಕರು, ವಿಶ್ಲೇಷಕರು, ನ್ಯಾಯಶಾಸ್ತ್ರಜ್ಞರು, ಹಣಕಾಸು ತಜ್ಞರು, ಸಾರ್ವಜನಿಕರ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಿ 191 ದಿನಗಳಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ವರದಿ ಸಿದ್ಧಪಡಿಸಿದೆ. ಈ ಸಂಬಂಧ ತಯಾರಾದ ವರದಿಯನ್ನು ಗುರುವಾರ ಸಲ್ಲಿಸಿದೆ.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದ ಉನ್ನತಮಟ್ಟದ ಸಮಿತಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ 18,623 ಪುಟಗಳ ವರದಿಯನ್ನು ಸಲ್ಲಿಸಿದೆ. ಈ ವೇಳೆ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ -ಡಿಪಿಎಪಿ ನಾಯಕ ಗುಲಾಂ ನಬಿ ಆಜಾದ್, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 47 ರಾಜಕೀಯ ಪಕ್ಷಗಳು ಏಕಕಾಲಕ್ಕೆ ಚುನಾವಣೆ ಕುರಿತು ಸಮಿತಿಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದು, 32 ಪಕ್ಷಗಳು ಅದನ್ನು ಬೆಂಬಲಿಸಿದರೆ, ಉಳಿದ 15 ಪಕ್ಷಗಳು ಈ ವಿಚಾರವನ್ನು ವಿರೋಧಿಸಿವೆ.
ವರದಿಯು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅಥವಾ 'ಒಂದು ರಾಷ್ಟ್ರ, ಒಂದು ಸಮೀಕ್ಷೆ' ಪರಿಕಲ್ಪನೆಯನ್ನು ರೂಪಿಸಲು ಕಾರಣಗಳನ್ನು ಪಟ್ಟಿ ಮಾಡಿದೆ. ಅವುಗಳ ವಿವರ ಇಂತಿದೆ.
ಆರ್ಥಿಕ ಹೊರೆ ತಗ್ಗಿಸಬಹುದು: ರಾಜ್ಯ ವಿಧಾನಸಭೆ ಮತ್ತು ಲೋಕಸಭೆಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲು ಪ್ರತ್ಯೇಕ ವೆಚ್ಚವಾಗುತ್ತದೆ. ಒಮ್ಮೆಲೆ ಈ ಚುನಾವಣೆ ನಡೆದರೆ ವೆಚ್ಚವು ಕಡಿಮೆ ಆಗಲಿದೆ. ಇದಷ್ಟೇ ಅಲ್ಲದೇ ಹಲವು ಮಹತ್ವದ ಸಂಗತಿಗಳನ್ನು ವರದಿಯಲ್ಲಿ ಹೇಳಲಾಗಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ ಏಕಕಾಲದಲ್ಲಿ ನಡೆಸುವುದರಿಂದ ಚುನಾವಣಾ ಕ್ಯಾಲೆಂಡರ್ ಅನ್ನು ಸಹ ಸುಗಮವಾಗಿ ರೆಡಿ ಮಾಡಬಹುದು. ಸಮಯವೂ ಉಳಿತಾಯವಾಗಲಿದೆ. ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಸುಲಭಗೊಳಿಸಲು ಮತ್ತು ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳ ಮಿತ ಬಳಕೆ ಮತ್ತು ಉಳಿತಾಯವನ್ನು ಮಾಡಬಹುದು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳು, ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಮಾಜಿ ಮುಖ್ಯ ಚುನಾವಣಾ ಆಯುಕ್ತರು, ರಾಜ್ಯ ಚುನಾವಣಾ ಆಯುಕ್ತರು ಮತ್ತು ಅರ್ಥಶಾಸ್ತ್ರಜ್ಞರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಒಳಗೊಂಡಂತೆ ವರದಿಯನ್ನು ತಯಾರು ಮಾಡಲಾಗಿದೆ. ನೇರ ಮತ್ತು ಪರೋಕ್ಷ ವೆಚ್ಚಗಳ ಕುರಿತು ಸಾಕ್ಷ್ಯ ಆಧಾರಿತ ಕಠಿಣ ಆರ್ಥಿಕ ವಿಶ್ಲೇಷಣೆಯನ್ನು ವರದಿಯಲ್ಲಿ ಮಾಡಲಾಗಿದೆ. ಒಟ್ಟು ದೇಶೀಯ ಉತ್ಪನ್ನ ಮತ್ತು ಹಣದುಬ್ಬರ ಸೇರಿದಂತೆ ರಾಷ್ಟ್ರೀಯ ಆರ್ಥಿಕತೆಯ ಮೇಲೆ ಅವುಗಳ ಪ್ರಭಾವಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಡಳಿತದ ಮೇಲೆ ಹೆಚ್ಚಿನ ಗಮನ ನೀಡಬಹುದು: ವರದಿಯ ಪ್ರಕಾರ, ರಾಜಕೀಯ ಪಕ್ಷಗಳು, ಅವುಗಳ ನಾಯಕರು, ಶಾಸಕರು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿತಾಯ ಮಾಡಬಹುದು. ಒಮ್ಮೆಲೆ ಚುನಾವಣೆ ನಡೆಯುವುದರಿಂದ ಆಗುವ ತೊಂದರೆಯನ್ನ ಕಡಿಮೆ ಮಾಡಬಹುದು. ಆಗುವ ನಷ್ಟವನ್ನು ತಡೆಯಬಹುದು. ಚುನಾವಣೆಯಲ್ಲಿ ಕಳೆಯುವ ಸಮಯವನ್ನು ಉತ್ತಮ ಆಡಳಿತದತ್ತ ನೀಡಬಹುದು.
ಪ್ರತಿ ವರ್ಷ, ಹಲವಾರು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದು ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಆಗಿಂದಾಗ್ಗೆ ನಿರ್ಬಂಧಗಳನ್ನು ವಿಧಿಸುತ್ತದೆ. ಇದರ ಪರಿಣಾಮವಾಗಿ, ಚುನಾವಣೆಯ ಮೊದಲು ಮತ್ತು ನಂತರ ರಾಜಕೀಯ ಮತ್ತು ಆಡಳಿತದ ಸಂಕೀರ್ಣತೆಗಳನ್ನು ಗುರುತಿಸಲು ಅಥವಾ ಸರಿಹೊಂದಿಸಲು ಸರ್ಕಾರಗಳು ಹೆಣಗಾಡಬೇಕಾಗುತ್ತದೆ. ಇವೆಲ್ಲ ಸಮಸ್ಯೆಗಳನ್ನು ಏಕ ಚುನಾವಣೆಯಿಂದ ನಿವಾರಿಸಬಹುದಾಗಿದೆ.
ಮಾದರಿ ನೀತಿ ಸಂಹಿತೆ ಮತ್ತು ಪರಿಣಾಮಗಳು: ಮಾದರಿ ನೀತಿ ಸಂಹಿತೆ (MCC) ಸರ್ಕಾರದ ಅಭಿವೃದ್ದಿ ಕೆಲಸಗಳ ಮೇಲೆ ಪರಿಣಾಮ ಬೀರುತ್ತವೆ. ಕೆಲ ಕಾಮಗಾರಿಗಳಿಗೆ ತೊಂದರೆ ಆಗುತ್ತದೆ. ನಿಯಮಿತ ಚುನಾವಣೆಗಳು ಮಾದರಿ ನೀತಿ ಸಂಹಿತೆಯನ್ನು ದೀರ್ಘಕಾಲದವರೆಗೆ ಜಾರಿಗೊಳಿಸಲು ಕಾರಣವಾಗುತ್ತವೆ. ಇದು ಆಡಳಿತ ಮತ್ತು ನೀತಿಗಳ ಜಾರಿಯಲ್ಲಿ ಭಾರಿ ತೊಂದರೆಗಳನ್ನುಂಟು ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರಮಾಣಿತ ಆಡಳಿತಾತ್ಮಕ ಕೆಲಸಗಳ ಹೊರತಾಗಿ, MCC ಅನ್ನು ತೆಗೆದುಹಾಕುವವರೆಗೆ, ಇತರ ದತ್ತಿ ಕಾರ್ಯಕ್ರಮಗಳ ಕಾರ್ಯಗತಗೊಳಿಸುವಿಕೆ ಮತ್ತು ಸರ್ಕಾರಿ ಯೋಜನೆಗಳ ಪ್ರಗತಿ ಮಂದಗತಿಗೆ ಹೋಗುತ್ತದೆ, ಇಲ್ಲವೇ ನಿಲ್ಲುತ್ತಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.
2019 ರಲ್ಲಿ ನಡೆದ 17 ನೇ ಲೋಕಸಭೆ ಚುನಾವಣೆ ಸಮಯದಲ್ಲಿ ಸುಮಾರು 70 ಲಕ್ಷ ಸಿಬ್ಬಂದಿ ಚುನಾವಣಾ ಆಯೋಗದ ಕೆಲಸವನ್ನು ಮಾಡಿದೆ. 12,03,800 ಮತಗಟ್ಟೆಗಳಲ್ಲಿ ಚುನಾವಣಾ ಪ್ರಕ್ರಿಯೆ ಸರ್ಕಾರದ ಸಿಬ್ಬಂದಿ ಪಾಲ್ಗೊಂಡಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ಪ್ರತಿ ಮತಗಟ್ಟೆಗೆ ಸರಾಸರಿ ಆರು ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಚುನಾವಣೆ ದಿನಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ. ಅಂದು ಇತರ ಖಾಸಗಿ, ಸರ್ಕಾರಿ ಸಂಸ್ಥೆಗಳು ಕೆಲಸ ಸ್ಥಗಿತಗೊಳಸಬೇಕಾಗುತ್ತದೆ.
ಹೆಚ್ಚಿದ ಮತದಾನ ಪ್ರಮಾಣ: ವಿವಿಧ ರಾಜ್ಯಗಳಲ್ಲಿನ ಹಿಂದಿನ ಚುನಾವಣೆಗಳ ಡೇಟಾವನ್ನು ಸಂಗ್ರಹಿಸಿರುವ ಸಮಿತಿ, ಏಕಕಾಲದಲ್ಲಿ ನಡೆದ ಚುನಾವಣೆಗಳಲ್ಲಿ ಮತದಾನದ ಸಂಖ್ಯೆ ಹೆಚ್ಚಳವಾಗಿದೆ ಎಂದು ಸೂಚಿಸುತ್ತದೆ. ಉದಾಹರಣೆಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ 1999 ರಲ್ಲಿ ಏಕಕಾಲಕ್ಕೆ ನಡೆದ ಚುನಾವಣೆ ವೇಳೆ, ಸುಮಾರು 11.5 ಪ್ರತಿಶತದಷ್ಟು ಮತದಾನ ಹೆಚ್ಚಳವಾಗಿತ್ತು. 1977 ರಲ್ಲಿ ಕೇರಳದಲ್ಲಿ ರಾಷ್ಟ್ರೀಯ ಚುನಾವಣೆಗಳೊಂದಿಗೆ ಏಕಕಾಲದಲ್ಲಿ ಎಲೆಕ್ಷನ್ ನಡೆಸಿದಾಗ, ಮತದಾನದ ಪ್ರಮಾಣವು ಶೇಕಡಾ 20 ಕ್ಕಿಂತ ಹೆಚ್ಚಾಗಿತ್ತು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏಕಕಾಲದಲ್ಲಿ ಚುನಾವಣೆಗಳು ನಡೆದರೆ, ಪ್ರಜಾಪ್ರಭುತ್ವದ ಪರಿಣಾಮಕಾರಿತ್ವ, ಒಳಗೊಳ್ಳುವಿಕೆ ಮತ್ತು ದಕ್ಷತೆ ಹೆಚ್ಚುತ್ತದೆ. ಹಾಗೂ ಮತದಾನ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಬಹುದು ಎಂದು ವರದಿ ಹೇಳಿದೆ. ಇದು ಆರ್ಥಿಕ ಸಂಕಷ್ಟ, ಮತದಾರರ ನಿರಾಸಕ್ತಿ ಮತ್ತು ಆಡಳಿತಾತ್ಮಕ ಸಂಕೀರ್ಣತೆಯ ಸಮಸ್ಯೆಗಳನ್ನು ಸಹ ನಿಭಾಯಿಸಬಲ್ಲದು ಎಂಬುದನ್ನು ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಇದನ್ನು ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ: 191 ದಿನಗಳಲ್ಲಿ ಅಧ್ಯಯನ ವರದಿ ಸಲ್ಲಿಸಿದ ಕೋವಿಂದ್ ಸಮಿತಿ