ಥಾಣೆ(ಮಹಾರಾಷ್ಟ್ರ): ಬಂಗಾಳ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್ ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಹೊತ್ತಲ್ಲೇ, ಮಹಾರಾಷ್ಟ್ರದಲ್ಲಿ ಇಬ್ಬರು ನರ್ಸರಿ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ವಿರುದ್ಧ ಪೋಷಕರು ಮತ್ತು ಬೆಂಬಲಿಗರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ, ಬದ್ಲಾಪುರ ನಗರದಲ್ಲಿ ರೈಲ್ವೆ ಸಂಚಾರ ತಡೆದು ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ನ ನರ್ಸರಿ ಶಾಲೆಯಲ್ಲಿ ಆಗಸ್ಟ್ 17ರಂದು ಈ ಘಟನೆ ನಡೆದಿದೆ. ಮಕ್ಕಳು ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದು, ಇದರಿಂದ ಕ್ರುದ್ಧರಾದ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆ ದಾಖಲಿಸಿಕೊಂಡು ಶಾಲೆಯ ಅಟೆಂಡರ್ನನ್ನು ಬಂಧಿಸಲಾಗಿದೆ. ಆಡಳಿತ ಮಂಡಳಿ ಕೂಡ ಕ್ರಮ ಜರುಗಿಸಿದ್ದು ಪ್ರಾಂಶುಪಾಲ, ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್ನನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣದ ಸಂಪೂರ್ಣ ವಿವರ: ಬದ್ಲಾಪುರ್ನ ನರ್ಸರಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಮೂರು ಮತ್ತು ನಾಲ್ಕು ವರ್ಷದ ವಿದ್ಯಾರ್ಥಿನಿಯರ ಮೇಲೆ ಆಗಸ್ಟ್ 17ರಂದು ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಶಾಲೆಯ ಅಟೆಂಡರ್ ತಮ್ಮನ್ನು ಶೌಚಾಲಯದಲ್ಲಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಮಕ್ಕಳಿಬ್ಬರು ಪೋಷಕರಿಗೆ ತಿಳಿಸಿದ್ದಾರೆ.
ಇದರ ವಿರುದ್ಧ ಪೋಷಕರು ಪೊಲೀಸ್ ದೂರು ನೀಡಿದ ಬಳಿಕ ಶಾಲೆಯ ಅಟೆಂಡರ್ನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ. ಘಟನೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಶಾಲಾ ಆಡಳಿತ ಮಂಡಳಿ ಕ್ಷಮೆ ಕೋರಿದೆ. ಜೊತೆಗೆ ಪ್ರಾಂಶುಪಾಲರು, ಓರ್ವ ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್ರನ್ನು ಅಮಾನತುಗೊಳಿಸಿದೆ. ಶಾಲೆಯ ಆವರಣದಲ್ಲಿ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದೆ.
ಪೊಲೀಸ್ ಅಧಿಕಾರಿ ಅಮಾನತು: ಮಕ್ಕಳಿಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಿದರೂ, ಠಾಣಾ ಪೊಲೀಸ್ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದರಿಂದ ಅವರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ. ಪ್ರಕರಣ ತೀವ್ರತೆ ಪಡೆದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಿಎಂ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡುವುದಾಗಿ ತಿಳಿಸಿದ್ದಾರೆ.
ರೈಲು ತಡೆದು ಪ್ರತಿಭಟನೆ: ನರ್ಸರಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ. ಜನರು ಬದ್ಲಾಪುರದ ರೈಲು ನಿಲ್ದಾಣಕ್ಕೆ ಆಗಮಿಸಿ ಸಂಚಾರ ತಡೆದರು. ಪೊಲೀಸರು ನಿರ್ಲಕ್ಷ್ಯ ಖಂಡಿಸಿ ಕಲ್ಲು ತೂರಾಟ ಕೂಡ ನಡೆದಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಜಿಲ್ಲಾಡಳಿತ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿತು. ಆದರೆ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆಗೆ ಕೆಲ ವರ್ತಕರೂ ಬೆಂಬಲ ನೀಡಿದ್ದು, ನಗರದಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ. ತೀವ್ರ ಆಕ್ರೋಶದಿಂದಾಗಿ ಲೈಂಗಿಕ ದೌರ್ಜನ್ಯ ನಡೆದ ಶಾಲೆಯನ್ನೂ ಬಂದ್ ಮಾಡಲಾಗಿದೆ.
ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಕಠಿಣ ಶಿಕ್ಷೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಶಾಲೆಯಲ್ಲಿ ಸಿಸಿಟಿವಿ ಇಲ್ಲದ ಕಾರಣ ಈ ಘಟನೆ ನಡೆದಿದೆ. ಶಾಲೆಗೆ ನೋಟಿಸ್ ಜಾರಿ ಮಾಡಲಾಗಿದ್ದು, ದೂರು ಪೆಟ್ಟಿಗೆ ಇಡುವಂತೆಯೂ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ತಿಳಿಸಿದ್ದಾರೆ.