ಸಮಸ್ತಿಪುರ (ಬಿಹಾರ) : ಬಂಗಾಳ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ವಿರುದ್ಧ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ, ಬಿಹಾರದಲ್ಲಿ ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ವೈದ್ಯರು ನರ್ಸ್ ಮೇಲೆ ರೇಪ್ಗೆ ಯತ್ನಿಸಿದಾಗ, ಆಕೆ ಹರಿತವಾದ ವಸ್ತುವಿನಿಂದ ವೈದ್ಯನ ಖಾಸಗಿ ಅಂಗ ಕತ್ತರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಹಾರದ ಸಮಸ್ತಿಪುರದ ಫಿಸಿಯೋಥೆರಪಿ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಪೊಲೀಸರ ಬಳಿಕ ನೀಡಿದ ಹೇಳಿಕೆಯ ಪ್ರಕಾರ, ಕುಡಿದ ಮತ್ತಿನಲ್ಲಿದ್ದ ವೈದ್ಯ ಮತ್ತು ಆತನ ಇಬ್ಬರು ಸಹಚರರು ತನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದರು. ಆಗ ನಾನು ವೈದ್ಯನ ಖಾಸಗಿ ಅಂಗವನ್ನು ಕತ್ತರಿಸಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾರೆ.
ನರ್ಸ್ ನೀಡಿದ ದೂರಿನ ಅನ್ವಯ ಮುಸ್ರಿಘರಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಿರುವುದನ್ನು ಡಿಎಸ್ಪಿ ಸಂಜಯ್ ಕುಮಾರ್ ಪಾಂಡೆ ಖಚಿತಪಡಿಸಿದ್ದಾರೆ. ಕುಡಿದಿದ್ದ ವೈದ್ಯ ಮತ್ತು ಆತನ ಇಬ್ಬರು ಸಹೋದ್ಯೋಗಿಗಳು ನರ್ಸ್ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದಾರೆ. ಇದನ್ನು ನರ್ಸ್ ವಿರೋಧಿಸಿದ್ದು, ಆರೋಪಿ ವೈದ್ಯರ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಕತ್ತರಿಸಿ ಪ್ರಾಣ ಉಳಿಸಿಕೊಳ್ಳಲು ಕ್ಲಿನಿಕ್ನಿಂದ ಓಡಿ ಹೊರ ಬಂದಿದ್ದಾರೆ. ಬಳಿಕ ಡಯಲ್ 112ಗೆ ತುರ್ತು ಕರೆ ಮಾಡಿದ್ದು, ಪೊಲೀಸರು ನರ್ಸ್ಅನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೂವರ ಬಂಧಿಸಿದ ಪೊಲೀಸರು: ಡಯಲ್ 112 ಕ್ಕೆ ನರ್ಸ್ ಕರೆ ಮಾಡಿದ ಬಳಿಕ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ತೆರಳಿ ಆಕೆಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದರು. ಬಳಿಕ ಸ್ಥಳದಲ್ಲಿದ್ದ ವೈದ್ಯ ಮತ್ತು ಆತನ ಇಬ್ಬರು ಸಹೋದ್ಯೋಗಿಗಳನ್ನು ಬಂಧಿಸಲಾಗಿದೆ. ಗಾಯಾಳು ವೈದ್ಯನಿಗೆ ಪೊಲೀಸರ ನಿಗಾದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಮಸ್ತಿಪುರ ಡಿಎಸ್ಪಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಸಂತ್ರಸ್ತೆಯ ಹೇಳಿಕೆ: ಘಟನೆಯ ಬಳಿಕ ಸಂತ್ರಸ್ತೆಯಿಂದ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ. ಕ್ಲಿನಿಕ್ನಲ್ಲಿದ್ದಾಗ ವೈದ್ಯ ಮತ್ತು ಇನ್ನಿಬ್ಬರು ಸಹೋದ್ಯೋಗಿಗಳು ತಮ್ಮ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದರು. ಕ್ಲಿನಿಕ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಆಫ್ ಮಾಡಿದ್ದರು. ಚಿಕಿತ್ಸಾಲಯಕ್ಕೆ ಒಳಗಿನಿಂದ ಬೀಗ ಹಾಕಲಾಗಿತ್ತು. ಆಗ ನಾನು ಪ್ರಾಣ ಉಳಿಸಿಕೊಳ್ಳಲು ಆರೋಪಿಯ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಕತ್ತರಿಸಿದೆ. ತಕ್ಷಣ ಕ್ಲಿನಿಕ್ನ ಬೀಗ ತೆರೆದು ಓಡಿ ಬಂದೆ. ಜಮೀನನಲ್ಲಿ ಅಡಗಿಕೊಂಡು ತುರ್ತು ಸಂಪರ್ಕ ಸಂಖ್ಯೆಯಾದ 112 ಗೆ ಕರೆ ಮಾಡಿದೆ ಎಂದು ನರ್ಸ್ ಹೇಳಿದ್ದಾರೆ.
ಇದನ್ನೂ ಓದಿ: ವೈದ್ಯೆ ಕೊಲೆ ಕೇಸ್: ಸುಪ್ರೀಂಕೋರ್ಟ್, ಸರ್ಕಾರದ ಮನವಿಗೂ ಬಗ್ಗದ ವೈದ್ಯರು - Doctors protest continue