ಡೆಹ್ರಾಡೂನ್: ವಿವಾಹಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವೆ ಅನ್ನೋದು ನಂಬಿಕೆ. ಅರ್ಥಾತ್, ದೇವರೇ ಜೋಡಿಯ ಮದುವೆಗೆ ಮೊಹರು ಹಾಕಿರುತ್ತಾನೆ. ಆದರೆ, ಇಲ್ಲೊಂದು ಪ್ರಕರಣ ವಿಚಿತ್ರವಾಗಿದೆ. 9 ವರ್ಷಗಳಿಂದ ಪ್ರೀತಿಸಿ, ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದು ಇದೀಗ 'ಮದುವೆಗೆ ದೇವರು ಒಪ್ಪಿಗೆ ನೀಡುತ್ತಿಲ್ಲ' ಎಂಬ ಕಾರಣ ನೀಡಿ ಇನಿಯನೊಬ್ಬ ತನ್ನ ಗೆಳತಿಯನ್ನು ನಿರಾಕರಿಸಿದ್ದಾನೆ.
ಇಂಥದ್ದೊಂದು ವಿಲಕ್ಷಣ ಕ್ಲೈಮ್ಯಾಕ್ಸ್ ಇರುವ ಪ್ರೇಮಕತೆ ಉತ್ತರಾಖಂಡದಲ್ಲಿ ಬೆಳಕಿಗೆ ಬಂದಿದೆ. ಮದುವೆಗೆ ದೈವದ ಅನುಮತಿ ಇಲ್ಲ ಎಂದು ಕಾರಣ ನೀಡಿ ತನ್ನ ಪ್ರೇಯಸಿಯನ್ನು ವಿವಾಹವಾಗಲು ವ್ಯಕ್ತಿಯೊಬ್ಬ ಹಿಂದೇಟು ಹಾಕಿದ್ದಾನೆ. ತನಗೆ ಅನ್ಯಾಯವಾಗಿದೆ ಎಂದು ಆ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪ್ರಕರಣದ ವಿವರ: ಪ್ರಕರಣದ ಮುಖ್ಯ ಪಾತ್ರದಲ್ಲಿರುವ ಯುವಕ-ಯುವತಿ ಉತ್ತರಾಖಂಡದ ಗರ್ಹಿ ಕ್ಯಾಂಟ್ ನಿವಾಸಿಗಳು. ಇಬ್ಬರೂ ಕಳೆದ 9 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಕಳೆದ ವರ್ಷವಷ್ಟೇ ಎರಡೂ ಕುಟುಂಬಗಳನ್ನು ಒಪ್ಪಿಸಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಮದುವೆಗೆ ಸಿದ್ಧತೆಯಲ್ಲಿದ್ದ ಜೋಡಿಗೆ 'ದೇವರು' ತೊಡಕಾಗಿರುವ ಆರೋಪ ಬಂದಿದೆ.
2023ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಜೋಡಿ ಇನ್ನೇನೂ ಮೂರು ಗಂಟಿನ ನಂಟಿಗೆ ಒಳಗಾಗಬೇಕಿತ್ತು. ಅಷ್ಟರಲ್ಲಿ ಯುವಕ ತಗಾದೆ ತೆಗೆದಿದ್ದಾನೆ. ಈ ಮದುವೆಗೆ ದೇವರ ಒಪ್ಪಿಗೆ ಇಲ್ಲ. ತಾನು ಈ ವಿವಾಹವಾಗಲಾರೆ ಎಂದು ತಿಳಿಸಿದ್ದಾನೆ. ಇದನ್ನು ಕೇಳಿದ ಯುವತಿಗೆ ಗರ ಬಡಿದಂತಾಗಿದೆ. ಸೂಕ್ತ ಕಾರಣವಿಲ್ಲದೇ, ವಿವಾಹವನ್ನು ಮುಂದೂಡುತ್ತಲೇ ಬಂದಿದ್ದ ಯುವಕ ಈಗ ದೇವರ ಅನುಮತಿ ಹೆಸರಲ್ಲಿ ವಿವಾಹ ನಿರಾಕರಿಸುತ್ತಿದ್ದಾನಂತೆ.
ಯುವಕನ ತಂದೆ ಮತ್ತು ಯುವತಿಯ ಪೋಷಕರು ಇಲ್ಲಿನ ದೇವಸ್ಥಾನವೊಂದರಲ್ಲಿ ಭೇಟಿಯಾಗಿದ್ದಾರೆ. ಇಬ್ಬರ ಮದುವೆಗೆ ದೇವರು ಅನುಮತಿ ನೀಡಿಲ್ಲ. ಈ ವಿವಾಹ ನಡೆಯುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಯುವಕ ನಿಶ್ಚಿತಾರ್ಥದ ಬಳಿಕ ತನ್ನೊಂದಿಗೆ ದೈಹಿಕ ಸಂಪರ್ಕ ಸಾಧಿಸಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.