ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆಗೆ ಅಲ್ಪಸಂಖ್ಯಾತ ಸಮುದಾಯದ ಬೆಂಬಲದ ಕೊರತೆ ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಇದೇ ವೇಳೆ, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಘೋಷಣೆ ಅನಗತ್ಯ ಎಂದು ಪ್ರತಿಪಾದಿಸಿರುವ ಅವರು, 'ಹಮ್ ಉಂಕೆ ಸಾಥ್, ಜೋ ಹುಮಾರೇ ಸಾಥ್' (ನಮ್ಮೊಂದಿಗೆ ಇರುವವರ ಜೊತೆ ನಾವಿದ್ದೇವೆ) ಎಂದು ಮಾತ್ರ ಹೇಳಬೇಕಿದೆ ಎಂದಿದ್ದಾರೆ.
2014ರಲ್ಲಿ ಮೊದಲ ಬಾರಿಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಬಿಜೆಪಿ ಘೋಷಣೆ ನೀಡಿತ್ತು. ನಂತರ 2019ರಲ್ಲಿ ಇದನ್ನು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್' ಎಂದು ವಿಸ್ತರಿಸಿತ್ತು. ಆದರೆ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ರಾಜ್ಯದ ಮತದಾರರಲ್ಲಿ ಸುಮಾರು ಶೇ.30ರಷ್ಟು ಅಲ್ಪಸಂಖ್ಯಾತರಿದ್ದಾರೆ. ಪಕ್ಷದ ಹಿನ್ನಡೆಗೆ ಅಲ್ಪಸಂಖ್ಯಾತರನ್ನು ಬಿಜೆಪಿ ನಾಯಕ ಬಹಿರಂಗವಾಗಿಯೇ ದೂರಿದ್ದಾರೆ.
BJP leader and LoP in West Bengal Suvendu Adhikari Wednesday raked up a controversy after he called for dissolving the saffron party's minority wing, asserting that it was time to stop the slogan " sabka saath, sabka vikas".#SuvenduAdhikari #WestBengal #SabkaSaathSabkaVikas #BJP pic.twitter.com/ucyIa6PYUJ
— ETV Bharat (@ETVBharatEng) July 17, 2024
ಸುವೇಂದು ಅಧಿಕಾರಿ ಹೇಳಿದ್ದೇನು?: ಬುಧವಾರ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸುವೇಂದು, 'ನಾನು ರಾಷ್ಟ್ರೀಯವಾದಿ ಮುಸ್ಲಿಮರಿಗಾಗಿಯೂ ಮಾತನಾಡಿದ್ದೇನೆ. ನಾವೆಲ್ಲರೂ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಹೇಳುತ್ತಿದ್ದೆವು. ಆದರೆ, ನಾನು ಇದನ್ನು ಇನ್ಮುಂದೆ ಹೇಳುವುದಿಲ್ಲ. ಏಕೆಂದರೆ, ಅದು 'ಹಮ್ ಉಂಕೆ ಸಾಥ್, ಜೋ ಹುಮಾರೇ ಸಾಥ್' ಆಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲದೇ, ಅಲ್ಪಸಂಖ್ಯಾತ ಮೋರ್ಚಾವೂ ಅಗತ್ಯವಿಲ್ಲ'' ಎಂದು ಹೇಳಿದ್ದಾರೆ.
''ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಿಲ್ಲ. ಟಿಎಂಸಿಯ ಜಿಹಾದಿ ಗೂಂಡಾಗಳು ಅದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ತೊಂದರೆಗೊಳಗಾದ ಪ್ರದೇಶಗಳ ಕಾಯ್ದೆಯನ್ನು (Disturbed Areas Act) ಜಾರಿಗೊಳಿಸುವುದರಿಂದ ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯ. ರಾಷ್ಟ್ರಪತಿ ಆಳ್ವಿಕೆಯ ಹಿಂಬಾಗಿಲಿನ ಮೂಲಕ ನಾವು ಅಧಿಕಾರ ಹಿಡಿಯಲು ಬಯಸುವುದಿಲ್ಲ'' ಎಂದೂ ತಿಳಿಸಿದ್ದಾರೆ. ಅಲ್ಲದೇ, ''ಜನಾದೇಶದೊಂದಿಗೆ ಚುನಾವಣೆಯಲ್ಲಿ ಗೆದ್ದಾಗ ನಾವು ಅಧಿಕಾರಕ್ಕೆ ಬರುತ್ತೇವೆ. ಆದರೆ ಅದಕ್ಕಾಗಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಫಲಿತಾಂಶಗಳು: ಪಶ್ಚಿಮ ಬಂಗಾಳದ 42 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿ 12 ಕಡೆ ಮಾತ್ರ ಗೆಲುವು ಸಾಧಿಸಿದೆ. 2019ರಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಇದಕ್ಕೆ ಹೋಲಿಸಿದರೆ, 6 ಸ್ಥಾನಗಳು ಖೋತಾ ಆಗಿವೆ. ಅಲ್ಲದೇ, ಕಳೆದ ವಾರ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ಕೇಸರಿ ಪಡೆ ಸೋಲು ಅನುಭವಿಸಿದೆ. ಕಳಪೆ ಪ್ರದರ್ಶನವು ಪಕ್ಷದ ನಾಯಕರ ನಿದ್ದೆಗೆಡಿಸಿದೆ.
ಇದನ್ನೂ ಓದಿ: 'ಸರ್ಕಾರಕ್ಕಿಂತ ಪಕ್ಷ ದೊಡ್ಡದು': ಯುಪಿ ಬಿಜೆಪಿಯಲ್ಲಿ ಭುಗಿಲೆದ್ದ ಬೇಗುದಿ, ಮೋದಿಗೆ ದೂರು