ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ನಕಲಿ ಮದ್ಯ ಕುಡಿದು 55 ಕ್ಕೂ ಜನರು ಸಾವಿಗೀಡಾಗಿ, 150 ಕ್ಕೂ ಅಧಿಕ ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದು ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದರ ಬೆನ್ನಲ್ಲೇ ಸಿಎಂ ಸ್ಟಾಲಿನ್ ನೇತೃತ್ವದ ಸರ್ಕಾರ ನಕಲಿ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮದ ನಿರ್ಧಾರಕ್ಕೆ ಕೈ ಹಾಕಿದೆ.
ಜೀವ ತೆಗೆಯುವ ಕಲಬೆರಕೆ ಮದ್ಯ ಮಾರಾಟದ ವಿರುದ್ಧ ಕಠಿಣ ಕಾನೂನು ರೂಪಿಸಲಾಗುವುದು ಎಂಬ ಸಿಎಂ ಹೇಳಿಕೆಯ ಬಳಿಕ, ವಿಧಾನಸಭೆಯಲ್ಲಿ ಇಂದು (ಜೂನ್ 29) ನಕಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ರದ್ದು ಮಾಡುವ ನಿಷೇಧಾಜ್ಞೆ ವಿಧೇಯಕವನ್ನು ಮಂಡಿಸಿ ಅಂಗೀಕರಿಸಲಾಗಿದೆ. ಸಚಿವ ಮುತ್ತುಸ್ವಾಮಿ ಅವರು ಈ ಮಸೂದೆಯನ್ನು ಮಂಡಿಸಿದರು.
ಕಲಬೆರಕೆ ಮದ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಅದನ್ನು ತಯಾರಿಸುವ, ಮಾರಾಟ ಮಾಡುವವರಿಗೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂಪಾಯಿವರೆಗೆ ದಂಡವನ್ನು ವಿಧಿಸುವ ನಿಯಮವನ್ನು ರೂಪಿಸಲಾಗಿದೆ.
ಈಗಿರುವ ಮದ್ಯ ನಿಷೇಧ ಕಾಯಿದೆ-1937 ರ ಪ್ರಕಾರ, ಮದ್ಯವನ್ನು ಆಮದು ಮಾಡಿಕೊಳ್ಳುವುದು, ರಫ್ತು ಮಾಡುವುದು ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ ಮಾನವನ ಜೀವಕ್ಕೆ ಹಾನಿಕಾರಕವಾದ ನಕಲಿ ಮದ್ಯ ತಯಾರಿಸುವುದು, ಮಾರಾಟ ಮಾಡುವುದದರ ಜೊತೆಗೆ ಇತರ ಅಪರಾಧಗಳಿಗೆ ನೀಡಬಹುದಾದ ಶಿಕ್ಷೆ ಕಠಿಣವಾಗಿಲ್ಲದ ಕಾರಣ, ಅಕ್ರಮಗಳು ನಡೆಯುತ್ತಿವೆ. ಶಿಕ್ಷೆಯನ್ನು ಬಲಪಡಿಸಲು ಕಾನೂನಿಗೆ ತಿದ್ದುಪಡಿ ತರಲಾಗಿದೆ.
ಇತ್ತೀಚೆಗೆ ಕಲ್ಲಕುರಿಚಿ ಜಿಲ್ಲೆಯಲ್ಲಿ ನಿಷೇಧಿತ ನಕಲಿ ಮದ್ಯ ಸೇವನೆ ಮಾಡಿ 55 ಮಂದಿ ಸಾವಿಗೀಡಾಗಿದ್ದರು. ಜೊತೆಗೆ 150 ಅಧಿಕ ಮಂದಿ ಅನಾರೋಗ್ಯಕ್ಕೀಡಾಗಿದ್ದಾರೆ. ಇದು ರಾಜ್ಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಪ್ರತಿಭಟನೆಗಳು ಕೂಡ ನಡೆದಿವೆ. ಇದನ್ನು ತಡೆಯಲು ಕಾಯ್ದೆಗೆ ತಿದ್ದುಪಡಿ ತಂದು ಜೈಲು ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಏನೆಲ್ಲಾ ಬದಲಾವಣೆ: ನಕಲಿ ಮದ್ಯ ಮಾರಾಟ ಕಂಡುಬಂದಲ್ಲಿ ಮದ್ಯ ನಿಷೇಧ ಕಾಯ್ದೆ-1937 ರ ಪ್ರಕಾರ, ಮಾರಾಟಗಾರರಿಗೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಮದ್ಯದ ಆಮದು ಮತ್ತು ರಫ್ತು ಶಿಕ್ಷಾರ್ಹವಾಗಿದೆ. ನಿಷಿದ್ಧ ವಸ್ತುಗಳ ಮಾರಾಟಕ್ಕೆ ಬಳಸಲಾದ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಮದ್ಯ ಸೇವನೆಗೆ ಬಳಸುವ ಸ್ಥಳಗಳನ್ನು ಜಪ್ತಿ ಮಾಡಲಾಗುತ್ತದೆ.
ಹೊಸ ಕಾನೂನುಗಳ ಅಡಿಯಲ್ಲಿ ಬಂಧಿತ ವ್ಯಕ್ತಿಗೆ ಯಾವುದೇ ಜಾಮೀನು ನೀಡಲಾಗುವುದಿಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ಅನುಮತಿ ನೀಡಿದಲ್ಲಿ ಮಾತ್ರ ಜಾಮೀನು ಸಿಗಲಿದೆ. ಅಪರಾಧ ಸಾಬೀತಾದಲ್ಲಿ ಅಂತಹ ವ್ಯಕ್ತಿಗಳನ್ನು ಆ ಪ್ರದೇಶದಿಂದಲೇ ಗಡಿಪಾರು ಮಾಡಲಾಗುವುದು. ಆಪಾದಿತರಿಗೆ ಶಿಕ್ಷೆ ಮತ್ತು ದಂಡವನ್ನು ವಿಧಿಸುವ ಅಧಿಕಾರ ತನಿಖಾಧಿಕಾರಿಗೆ ನೀಡಲಾಗಿದೆ.
ಇದನ್ನೂ ಓದಿ: ತಮಿಳುನಾಡು ನಕಲಿ ಮದ್ಯ ದುರಂತ: ಗಂಡಂದಿರನ್ನು ಕಳೆದುಕೊಂಡ 44 ಮಹಿಳೆಯರು! - Tamil Nadu Hooch Tragedy