ನವದೆಹಲಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಿಂದ ಭಾರತೀಯ ಸೇನಾ ಸಿಬ್ಬಂದಿಯನ್ನು ಬದಲಾಯಿಸುವ ಪ್ರಕ್ರಿಯೆ ಕುರಿತಂತೆ ಎರಡು ರಾಷ್ಟ್ರಗಳ ನಡುವೆ ಭಾನುವಾರ ಪರಿಶೀಲನಾ ಸಭೆ ಜರುಗಿತು. ಈಗಾಗಲೇ ಭಾರತವು ಮೊದಲ ಹಂತದಲ್ಲಿ ಸೇನೆಯ ಒಂದು ತಂಡವನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇಂದು ಭಾರತ ಮತ್ತು ಮಾಲ್ಡೀವ್ಸ್ ದೇಶಗಳು ಮಾತುಕತೆ ನಡೆಸಿದ್ದು, ಎರಡನೇ ತಂಡವು ಏಪ್ರಿಲ್ 10ರೊಳಗೆ ಅಲ್ಲಿಂದ ಹಿಂದಿರುಗುವ ಸಾಧ್ಯತೆ ಇದೆ.
ಮಾಲ್ಡೀವ್ಸ್‌ನಿಂದ ಭಾರತೀಯ ಸೇನಾ ಪಡೆಗಳನ್ನು ವಾಪಸ್ ತೆಗೆದುಕೊಳ್ಳಲು ಅಲ್ಲಿನ ಸರ್ಕಾರ ಸೂಚಿಸಿದೆ. ಇದು ಎರಡು ರಾಷ್ಟ್ರಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ನಡುವೆ ಹಿಂದೂ ಮಹಾಸಾಗರದ ದ್ವೀಪಸಮೂಹದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ಅನ್ನು ನಿರ್ವಹಿಸುತ್ತಿದ್ದ ಸೇನಾ ಸಿಬ್ಬಂದಿಯ ಮೊದಲ ತಂಡವನ್ನು ಭಾರತ ಕೆಲ ದಿನಗಳ ಹಿಂದೆ ಹಿಂಪಡೆದುಕೊಂಡಿದೆ. ಈಗ ಮಾಲ್ಡೀವ್ಸ್‌ನ ಮಾಲೆಯಲ್ಲಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಉನ್ನತ ಮಟ್ಟದ ಕೋರ್ ಗುಂಪಿನ ಮೂರನೇ ಸಭೆ ನಡೆಸಲಾಗಿದೆ.
ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಮೂರು ವಾಯುಯಾನ ನೆಲೆಗಳನ್ನು ನಿರ್ವಹಿಸುತ್ತಿದ್ದಾರೆ. ಬಿಕ್ಕಟ್ಟಿನ ಕಾರಣ ಸೇನಾ ಪಡೆಯನ್ನು ಹಿಂಪಡೆದುಕೊಂಡು, ಅಲ್ಲಿ ನಾಗರಿಕ ತಾಂತ್ರಿಕ ತಜ್ಞರನ್ನು ನಿಯೋಜಿಸಲು ಮುಂದಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ತಮ್ಮ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲ ತಂಡವನ್ನು ಹಿಂತೆಗೆದುಕೊಳ್ಳಲು ಮಾರ್ಚ್ 10ರ ಗಡುವು ನಿಗದಿಪಡಿಸಿದ್ದರು.
ಇಂದಿನ ಸಭೆ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದ್ದು, ಮಾಲ್ಡೀವ್ಸ್‌ನ ಜನರಿಗೆ ಮಾನವೀಯ ಮತ್ತು ವೈದ್ಯಕೀಯ ಸೌಲಭ್ಯಗಳ ಸ್ಥಳಾಂತರಿಸುವಿಕೆ ಸೇವೆಗಳನ್ನು ಒದಗಿಸುವ ಭಾರತೀಯ ವಾಯುಯಾನ ನೆಲೆಗಳ ನಿರಂತರ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲು ಭಾರತೀಯ ತಾಂತ್ರಿಕ ಸಿಬ್ಬಂದಿಯ ಪ್ರಸ್ತುತ ನಿಯೋಜನೆಯನ್ನು ಎರಡೂ ಕಡೆಯವರು ಪರಿಶೀಲಿಸಿದರು ಎಂದು ತಿಳಿಸಿದೆ.
ಅಲ್ಲದೇ, ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ವ್ಯಾಪಕ ವಿಷಯಗಳ ಕುರಿತು ಎರಡೂ ಕಡೆಯವರು ತಮ್ಮ ಚರ್ಚೆಗಳನ್ನು ಮುಂದುವರೆಸಿದರು. ಜಂಟಿ ಮೇಲ್ವಿಚಾರಣಾ ಕಾರ್ಯವಿಧಾನಗಳ ನಿಯಮಿತ ಸಭೆಯು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಪ್ರಯತ್ನಗಳು ಮತ್ತು ಸಾಮರ್ಥ್ಯ ವೃದ್ಧಿ ಮತ್ತು ಪ್ರಯಾಣದ ಮೂಲಕ ಜನರ ಸಂಪರ್ಕವನ್ನು ಹೆಚ್ಚಿಸುವ ಮೂಲಕ ನಡೆಯುತ್ತಿರುವ ಅಭಿವೃದ್ಧಿ ಸಹಕಾರ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದಕ್ಕೆ ಕ್ರಮ ವಹಿಸಿದೆ. ಇದುವರೆಗೆ ಒಂದು ನೆಲೆಯಲ್ಲಿ ಸೇನಾ ಸಿಬ್ಬಂದಿ ಬದಲಿಗೆ ನಾಗರಿಕರನ್ನು ನಿಯೋಜಿಸಲಾಗಿದೆ. ಇನ್ನೆರಡು ನೆಲೆಗಳಲ್ಲಿನ ಸಿಬ್ಬಂದಿಯನ್ನು ಏಪ್ರಿಲ್ 10 ಮತ್ತು ಮೇ 10ರಂದು ಬದಲಾಯಿಸಲಾಗುವುದು ಎಂದು ಎಂದು ತಿಳಿಸಿದೆ.
ಇದನ್ನೂ ಓದಿ: ಗುಜರಾತ್ ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಪ್ರಕರಣ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ - ವಿದೇಶಾಂಗ ಸಚಿವಾಲಯ